Tuesday, April 22, 2025
Google search engine

Homeರಾಜ್ಯಸುದ್ದಿಜಾಲರೈತರ ಜಮೀನಿನಲ್ಲಿ ಬರ ಅಧ್ಯಯನ ತಂಡದಿಂದ ಬರ ವೀಕ್ಷಣೆ

ರೈತರ ಜಮೀನಿನಲ್ಲಿ ಬರ ಅಧ್ಯಯನ ತಂಡದಿಂದ ಬರ ವೀಕ್ಷಣೆ

ಚಿತ್ರದುರ್ಗ: ಪ್ರಸಕ್ತ ಸಾಲಿನ ಮುಂಗಾರು ಮಳೆ ಕೊರತೆಯಿಂದ ಉಂಟಾಗಿರುವ ಬರ ಪರಿಸ್ಥಿತಿಯ ಅಧ್ಯಯನ ಮಾಡಲು ಕೇಂದ್ರ ಜಲಶಕ್ತಿ ಆಯೋಗದ ನಿರ್ದೇಶಕ ವಿ.ಅಶೋಕ್ ಕುಮಾರ್ ನೇತೃತ್ವದಲ್ಲಿ ಎಂ.ಎನ್.ಸಿ.ಎಫ್.ಸಿ ಉಪನಿರ್ದೇಶಕ ಕರಣ್ ಚೌಧರಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪಕಾರ್ಯದರ್ಶಿ ಸಂಗೀತ್ ಕುಮಾರ್ ಹಾಗೂ ರಾಜ್ಯ ಪ್ರಕೃತಿ ವಿಕೋಪ ನಿರ್ವಹಣಾ ಕೇಂದ್ರದ ಹಿರಿಯ ಸಲಹೆಗಾರ ಡಾ. ಶ್ರೀನಿವಾಸ ರೆಡ್ಡಿ ಅವರನ್ನು ಒಳಗೊಂಡ ಕೇಂದ್ರ ಬರ ಅಧ್ಯಯನ ತಂಡ ಶನಿವಾರದಂದು ಚಿತ್ರದುರ್ಗ ಜಿಲ್ಲೆಯ ವಿವಿಧೆಡೆ ರೈತರ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ರೈತರು ಮತ್ತು ಅಧಿಕಾರಿಗಳಿಂದ ಅಗತ್ಯ ಮಾಹಿತಿ ಪಡೆದುಕೊಂಡಿತು.

ಚಿತ್ರದುರ್ಗ ಜಿಲ್ಲೆಯ ಆರು ತಾಲ್ಲೂಕುಗಳು ಬರಪೀಡಿತ ಪ್ರದೇಶ ಎಂದು ರಾಜ್ಯ ಸರ್ಕಾರ ಘೋಷಣೆ ಮಾಡಿದ ಹಿನ್ನಲೆಯಲ್ಲಿ ಜಿಲ್ಲೆಯ ವಿವಿಧ ಸ್ಥಳಗಳಿಗೆ ಭೇಟಿ ನೀಡಿದ ಕೇಂದ್ರ ಬರ ಅಧ್ಯಯನ ತಂಡ, ಬರ ಕುರಿತು ಮಾಹಿತಿ ಪಡೆಯಿತು. ಕೇಂದ್ರ ಬರ ಅಧ್ಯಯನ ತಂಡವು ಮೊದಲಿಗೆ ಚಿತ್ರದುರ್ಗ ತಾಲ್ಲೂಕಿನ ವಿಜಾಪುರ ಗ್ರಾಮದ ಮಲ್ಲಿಕಾರ್ಜುನಯ್ಯ ಅವರ ಮೆಕ್ಕೆಜೋಳ, ಎಸ್. ಎಂ. ತಿಪ್ಪೇಸ್ವಾಮಿ ಅವರ ಮೆಕ್ಕೆಜೋಳ ಬೆಳೆ ಮತ್ತು ಸೌಭಾಗ್ಯಮ್ಮ ಅವರ ರಾಗಿ ಜಮೀನಿಗೆ ಭೇಟಿ ನೀಡಿ ಬೆಳೆ ವೀಕ್ಷಣೆ ಮಾಡಿದರು. ವಿಜಾಪುರ ಗ್ರಾಮದ ಬೆಳೆ ವೀಕ್ಷಣೆ ನಂತರ ಬಿರಾವರ ಗ್ರಾಮದ ವಿನಯ್, ಪರಮಶಿವಯ್ಯ ಜಮೀನು ಹಾಗೂ ಕುಬೇಂದ್ರ ಹಾಗೂ ಹರೀಶ್ ಬಾಬು ಅವರ ಜಮೀನಿಗೆ ಭೇಟಿ ನೀಡಿ, ಮಳೆ ಕೊರತೆಯಿಂದ ಒಣಗಿದ್ದ ರಾಗಿ ಮತ್ತು ಮೆಕ್ಕೆಜೋಳ ಬೆಳೆ ವೀಕ್ಷಿಸಿದರು.

ಶನಿವಾರದಂದು ಮುಂಜಾನೆಯಿಂದಲೇ ಬರ ಪೀಡಿತ ಪ್ರದೇಶಗಳಿಗೆ ತೆರಳಿ ಪರಿಶೀಲನೆ ನಡೆಸಲು ತೆರಳಿದ ಕೇಂದ್ರ ಅಧ್ಯಯನ ತಂಡ ಮೊದಲಿಗೆ ತಾಲೂಕಿನ ವಿಜಾಪುರ ಗ್ರಾಮದ ಮಲ್ಲಿಕಾರ್ಜುನಯ್ಯ ಅವರ ಮೆಕ್ಕೆಜೋಳ, ಎಸ್.ಎಂ. ತಿಪ್ಪೇಸ್ವಾಮಿ ಅವರ ಮೆಕ್ಕೆಜೋಳ, ಸೌಭಾಗ್ಯಮ್ಮ ಅವರ ರಾಗಿ ಜಮೀನಿಗೆ ಭೇಟಿ ನೀಡಿ ಬೆಳೆ ವೀಕ್ಷಣೆ ಮಾಡಿತು. ರೈತರು ಹಾಗೂ ಅಧಿಕಾರಿಗಳು ಮಳೆಯ ಕೊರತೆಯಿಂದ ಬೆಳೆ ಹಾನಿಯಾದ ಬಗ್ಗೆ, ಬೆಳೆಯ ಪೈರುಗಳನ್ನು ತೋರಿಸಿ, ಬರದ ತೀವ್ರತೆಯ ಬಗ್ಗೆ ಮನವರಿಕೆ ಮಾಡಿಕೊಟ್ಟರು. ಇಲ್ಲಿಗೆ ಸಮೀಪದ ವಿನಯ್ ಅವರ ಮೆಕ್ಕೆಜೋಳ ಹೊಲಕ್ಕೆ ಭೇಟಿ ನೀಡಿದ ತಂಡವು ಮಳೆಯ ಕೊರತೆಯಿಂದ ಒಣಗಿಹೋಗುತ್ತಿರುವ ಮೆಕ್ಕೆಜೋಳ ಪೈರಿನ ವೀಕ್ಷಣೆ ಮಾಡಿತು.

ಇದೇ ಗ್ರಾಮದ ಶಶಾಂಕ್ ರಾಯ್ ಅವರ ರಾಗಿ ಹೊಲಕ್ಕೂ ಕೂಡ ಭೇಟಿ ನೀಡಿದ ತಂಡ, ಇಲ್ಲಿ ಕೂಡ ರಾಗಿ ಬೆಳೆ ಕಾಳುಕಟ್ಟದೆ ಹಾಳಾಗಿರುವುದನ್ನು ಗಮನಿಸಿತು, ಅಲ್ಲದೆ ರೈತರಿಂದ ಹಾನಿಯ ಬಗ್ಗೆ ಮಾಹಿತಿ ಪಡೆದುಕೊಂಡಿತು. ರೈತರು ಮುಂಗಾರು ಮಳೆ ಇಲ್ಲದೆ ಬೆಳೆ ಹಾನಿಯಾದ ಬಗ್ಗೆ ಹಾಗೂ ಉಂಟಾದ ನಷ್ಟದ ಬಗ್ಗೆ ತಮ್ಮ ಅಳಲನ್ನು ತೋಡಿಕೊಂಡು, ಬೆಳೆ ನಷ್ಟ ಪರಿಹಾರಕ್ಕೆ ಮನವಿ ಮಾಡಿದರು. ರೈತ ತನ್ನ 04 ಎಕರೆಯಲ್ಲಿ ಮೆಕ್ಕೆಜೋಳ ಬೆಳೆ ಬಿತ್ತಿದ್ದು, ಬೆಳೆಯ ಪೈರು ಹಸಿರಾಗಿದ್ದರೂ, ಕಾಳು ಕಟ್ಟದೆ ಕೇವಲ ದಂಟು ಇರುವುದನ್ನು ತಂಡವು ವೀಕ್ಷಿಸಿತು. ರೈತ ರವಿ ನಾರಾಯಣ್ ಮಾಹಿತಿ ನೀಡಿ, ಉತ್ತಮ ಮಳೆಯ ನಿರೀಕ್ಷೆಯಲ್ಲಿ ತನ್ನ 04 ಎಕರೆಯಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಿದ್ದು, ಮಳೆ ಕೈಕೊಟ್ಟ ಕಾರಣ ಬೆಳೆ ಹಾಳಾಗಿದೆ, ಪ್ರತಿ ಎಕರೆಗೆ ಬೀಜ, ಗೊಬ್ಬರ, ಕೃಷಿ ಚಟುವಟಿಕೆಗಾಗಿ ಸುಮಾರು 15 ರಿಂದ 20 ಸಾವಿರ ರೂ. ಖರ್ಚಾಗಿದೆ, ಉತ್ತಮ ಮಳೆಯಾಗಿದ್ದರೆ, ಎಕರೆಗೆ ಕನಿಷ್ಟ 25 ರಿಂದ 30 ಕ್ವಿಂಟಾಲ್ ಮೆಕ್ಕೆಜೋಳ ಬೆಳೆ ಪಡೆಯುತ್ತಿದ್ದೆ, ಆದರೆ ಮಳೆ ಇಲ್ಲದ ಕಾರಣ ತೀವ್ರ ನಷ್ಟ ಉಂಟಾಗಿದೆ.

ಬೆಳೆ ವೀಕ್ಷಣೆ ಮಾಡಿ ಮಾಧ್ಯಮದವರೊಂದಿಗೆ ಮಾತನಾಡಿದ ಕೇಂದ್ರ ಬರ ಅಧ್ಯಯನ ಮೂರನೇ ತಂಡದ ನೇತೃತ್ವವಹಿಸಿರುವ ಕೇಂದ್ರ ಜಲಶಕ್ತಿ ಆಯೋಗದ ನಿರ್ದೇಶಕ ವಿ.ಅಶೋಕ್ ಕುಮಾರ್, ಈಗಾಗಲೇ ಚಿಕ್ಕಬಳ್ಳಾಪುರ ಹಾಗೂ ತುಮಕೂರು ಜಿಲ್ಲೆಗಳ ಬರ ಅಧ್ಯಯನ ಕಾರ್ಯಕೈಗೊಂಡು, ಶನಿವಾರ ಚಿತ್ರದುರ್ಗ ಜಿಲ್ಲೆಯ ವಿವಿಧೆಡೆ ರೈತರ ಜಮೀನುಗಳಿಗೆ ಭೇಟಿ ನೀಡಿ, ಬರ ಪರಿಸ್ಥಿತಿಯ ಅಧ್ಯಯನ ಮಾಡಲಾಗುತ್ತಿದೆ. ಜಿಲ್ಲೆಯ ಮೆಕ್ಕೆಜೋಳ, ರಾಗಿ, ಶೇಂಗಾ, ತೊಗರಿ ಸೇರಿದಂತೆ ತೋಟಗಾರಿಕೆ ಬೆಳೆಗಳನ್ನು ವೀಕ್ಷಣೆ ಮಾಡಲಾಗಿದ್ದು, ಮಳೆಯ ಕೊರತೆಯಿಂದಾಗಿ ಇಲ್ಲಿನ ಬೆಳೆಗಳ ಸ್ಥಿತಿ ಉತ್ತಮವಾಗಿಲ್ಲದಿರುವುದು ಕಂಡುಬಂದಿದೆ. ಸರ್ಕಾರದ ಮಾರ್ಗಸೂಚಿಯನ್ವಯ ಜಿಲ್ಲೆಯ ಬರ ಅಧ್ಯಯನ ವರದಿಯನ್ನು ರಾಜ್ಯದ ಬರ ಅಧ್ಯಯನ ತಂಡದ ನೇತೃತ್ವ ವಹಿಸಿರುವ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದ ಜಂಟಿಕಾರ್ಯದರ್ಶಿ ಅಜಿತ್ ಕುಮಾರ್ ಸಾಹು ಅವರಿಗೆ ಸಲ್ಲಿಸಲಾಗುವುದು, ಬಳಿಕ ರಾಜ್ಯದ ಸಂಗ್ರಹಿತ ಕ್ರೋಢೀಕೃತ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಿದರು.

ರೈತರ ಜಮೀನುಗಳಿಗೆ ಭೇಟಿ ನೀಡುವುದಕ್ಕೂ ಮುನ್ನ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಭೆ ನಡೆಯಿತು. ಕೇಂದ್ರ ಬರ ಅಧ್ಯಯನ ತಂಡಕ್ಕೆ ಜಿಲ್ಲೆಯ ಬರ ಪರಿಸ್ಥಿತಿ ಕುರಿತು ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಅವರು ಪವರ್ ಪಾಯಿಂಟ್ ಪ್ರೆಸೆಂಟೇಶನ್ ಮೂಲಕ ಸಂಪೂರ್ಣ ಅಂಕಿ ಅಂಶ ಸಹಿತ ಮನವರಿಕೆ ಮಾಡಿಕೊಟ್ಟರು.

RELATED ARTICLES
- Advertisment -
Google search engine

Most Popular