ನವದೆಹಲಿ: ತೀವ್ರ ಬರದಿಂದ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯಕ್ಕೆ ಪರಿಹಾರ ರೂಪದಲ್ಲಿ ಕೇಂದ್ರ ಸರ್ಕಾರವು ಮಂಜೂರು ಮಾಡಿರುವ ೩,೪೫೪ ಕೋಟಿ ಮೊತ್ತವು ಕೇಳಿದ್ದಕ್ಕಿಂತ ತೀರಾ ಕಡಿಮೆ ಎಂದು ಕರ್ನಾಟಕ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ವಾದಿಸಿದೆ.
ಬರ ನಿರ್ವಹಣೆಗಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯಿಂದ (ಎನ್‌ಡಿಆರ್‌ಎಫ್) ಹಣಕಾಸು ನೆರವು ನೀಡುವಂತೆ ಕೇಂದ್ರಕ್ಕೆ ಸೂಚಿಸಬೇಕು ಎಂದು ಕೋರಿ ಕರ್ನಾಟಕ ಸರ್ಕಾರ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಹಾಗೂ ಸಂದೀಪ್ ಮೆಹ್ತಾ ಅವರಿದ್ದ ಪೀಠ ನಡೆಸುತ್ತಿದೆ.
ವಿಚಾರಣೆಯ ಸಂದರ್ಭದಲ್ಲಿ ರಾಜ್ಯದ ಪರ ವಕೀಲ ಕಪಿಲ್ ಸಿಬಲ್, ಅಂತರ್ ಸಚಿವಾಲಯದ ವರದಿಯ ಪ್ರತಿ ಸಲ್ಲಿಸಲು ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದರು. ಈ ಸಂಬಂಧ ಕೇಂದ್ರಕ್ಕೆ ನಿರ್ದೇಶನ ನೀಡಿರುವ ಪೀಠವು ವಿಚಾರಣೆಯನ್ನು ಸೋಮವಾರಕ್ಕೆ (ಮೇ ೬) ಮುಂದೂಡಿದೆ. ಕಳೆದ ವಿಚಾರಣೆ ವೇಳೆ ಕೇಂದ್ರ ಸರ್ಕಾರದ ಅಟಾರ್ನಿ ಜನರಲ್ ಆರ್.ವೆಂಕಟರಮಣಿ, `ಪರಿಹಾರ ನೀಡಲು ಚುನಾವಣಾ ಆಯೋಗ ಅನುಮತಿ ನೀಡಿದೆ. ತ್ವರಿತವಾಗಿ ಕ್ರಮ ಕೈಗೊಳ್ಳಲಾಗುವುದು’ ಎಂದು ವಾಗ್ದಾನ ಮಾಡಿದ್ದರು. ವಿಚಾರಣೆಯನ್ನು ಮುಂದೂಡುವಂತೆ ಕೋರಿದ್ದರು. ರಾಜ್ಯಕ್ಕೆ ೩,೪೫೪ ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರವು ಘೋಷಿಸಿತ್ತು.