ಮೈಸೂರು: ಮೋಜಿಗಾಗಿ, ತಮಾಷೆಗಾಗಿ ಆರಂಭವಾಗುವ ಮಾದಕ ವಸ್ತುಗಳ ಸೇವನೆ ಸಮಯ ಕಳೆದಂತೆ ಅದೇ ಅಡಿಕ್ಷನ್ ಆಗುತ್ತದೆ. ಮಾದಕ ವಸ್ತುಗಳ ವ್ಯಸನಕ್ಕೆ ಒಮ್ಮೆ ವಶವಾದರೆ, ಈ ಎಲ್ಲ ಪರಿಸ್ಥಿತಿಗಳಿಗೂ ಹದಗೆಡುತ್ತವೆ. ಹಾಗಾಗಿ, ಅವುಗಳನ್ನು ತ್ಯಜಿಸಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಕುಮಾರಸ್ವಾಮಿ ತಿಳಿಸಿದರು.
ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜೆಎಸ್‌ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾನಿಲಯ ಹಾಗೂ ಶ್ರೀಜಯಚಾಮರಾಜೇಂದ್ರ ಇಂಜಿನಿಯರಿಂಗ್ ಕಾಲೇಜು ಸಹಯೋಗದಲ್ಲಿ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ವ್ಯಸನ ಮುಕ್ತ ದಿನಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದೈಹಿಕವಾಗಿ, ಮಾನಸಿಕವಾಗಿ, ಸಾಮಾಜಿಕವಾಗಿ, ಆಧ್ಯಾತ್ಮಿಕವಾಗಿ ಮತ್ತು ಆರ್ಥಿಕವಾಗಿ ಉತ್ತಮ ಪರಿಸ್ಥಿತಿ ಕಾಯ್ದುಕೊಂಡು ಹೋಗುವುದನ್ನು ಆರೋಗ್ಯ ಎನ್ನಲಾಗುತ್ತದೆ. ಆದರೆ, ಒಟ್ಟು ಜನಸಂಖ್ಯೆಯಲ್ಲಿ ಶೇ.೨೭ರಷ್ಟು ಮಂದಿ ಒಂದಲ್ಲ ಒಂದು ಮಾದಕ ವ್ಯಸನಕ್ಕೆ ಒಳಗಾಗಿದ್ದಾರೆ. ಈ ನಿಟ್ಟಿನಲ್ಲಿ ಇಂತಹ ವಸ್ತುಗಳ ಬಗ್ಗೆ ಅರಿವು ಮೂಡಿಸುವ ಜತೆಗೆ ಸಾಮಾಜಿಕ ನಡವಳಿಯಲ್ಲಿ ಬದಲಾವಣೆ ತರಲು ನಮ್ಮ ಇಲಾಖೆ ವತಿಯಿಂದ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ. ಜಿಲ್ಲೆಯಲ್ಲಿನ ೧,೫೦೦ ಆಶಾಕಾರ್ಯಕರ್ತೆಯರು ಪಿಎಚ್‌ಸಿ, ಸಿಎಚ್‌ಸಿ ಸೇರಿದಂತೆ ೬೫೦ ಸಂಸ್ಥೆಗಳು, ಎನ್‌ಜಿಒಗಳ ಸಹಾಯದಿಂದ ವ್ಯಸನ ಮುಕ್ತಗೊಳಿಸುವ ಬಗ್ಗೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಮನೆ ಮನೆಗಳಿಗೆ ಭೇಟಿ ನೀಡಿ ತಂಬಾಕು, ತಂಬಾಕು ಉತ್ಪನ್ನಗಳು ಮತ್ತು ಮದ್ಯ ಸೇವನೆ ತೊರೆಯುವಂತೆ ಅರಿವು ಮೂಡಿಸಲಾಗುತ್ತಿದೆ. ಇವುಗಳಿಂದ ಹೊರ ಬರಲು ನಮ್ಮಲ್ಲಿ ಚಿಕಿತ್ಸೆಯನ್ನೂ ನೀಡಲಾಗುತ್ತದೆ ಎಂದರು.
ಇದೇ ವೇಳೆ ಮಾದಕ ವಸ್ತುಗಳನ್ನು ತ್ಯಜಿಸುತ್ತೇವೆ ಎಂದು ಪ್ರತಿಜ್ಞಾವಿಧಿ ಬೋಧಿಸಲಾಯಿತು. ಮದ್ಯಪಾನ, ಮಾದಕ ವಸ್ತುಗಳು ಹಾಗೂ ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಕುರಿತು ಮನೋರೋಗ ತಜ್ಷೆ ಡಾ.ಸುಧಾರಾಣಿ ನಾಯಕ್ ಜಾಗೃತಿ ಮೂಡಿಸಿದರು.
ಕಾರ್ಯಕ್ರಮದಲ್ಲಿ ವಾರ್ತಾ ಇಲಾಖೆಯ ಉಪನಿರ್ದೇಶಕ ಡಿ.ಅಶೋಕ್ ಕುಮಾರ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮಹದೇವಸ್ವಾಮಿ, ಕಾಲೇಜಿನ ವಿದ್ಯಾರ್ಥಿ ಕ್ಷೇಮ ಪಾಲನಾ ನಿರ್ದೇಶಕ ಡಾ.ಮನೋಜ್ ಕುಮಾರ್, ಶಿವಪ್ರಸಾದ್, ಚನ್ನಬಸವಣ್ಣ, ಎಂ.ಎಸ್.ಸುನೀಲ್ ಇತರರು ಹಾಜರಿದ್ದರು.