ಮೈಸೂರು: ನಂಜನಗೂಡು ತಾಲೂಕು ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ)ವತಿಯಿಂದ ಮಂಗಳವಾರ ಸಂವಿಧಾನ ದಿನಾಚರಣೆಯನ್ನು ಆಚರಿಸಲಾಯಿತು. ನಗರದ ಅಂಬೇಡ್ಕರ್ ವೃತ್ತದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಭಾರತ ಸಂವಿಧಾನದ ಪ್ರಸ್ತಾವನೆಗೆ ಪುಷ್ಪನಮನ ಸಲ್ಲಿಸಿದರು. ಬಳಿಕ ಭಾರತದ ಸಂವಿಧಾನ ಪೀಠಿಕೆಯನ್ನು ಬೋಧಿಸಿ, ಪ್ರತಿಜ್ಞಾವಿಧಿ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಡಿ ಎಸ್ ಎಸ್ ಪ್ರಧಾನ ಸಂಚಾಲಕ ಮಲ್ಲಹಳ್ಳಿ ನಾರಾಯಣ ಮಾತನಾಡಿ, ಬಿಹಾರದ ಬೋಧಗಯಾದಲ್ಲಿರುವ ಮಹಾಬೋಧಿ ವಿಹಾರದ ಸಂಪೂರ್ಣ ಆಡಳಿತ ಬೌದ್ಧರಿಗೆ ಹಸ್ತಾಂತರವಾಗಬೇಕು. ಬುದ್ಧನಿಗೆ ಜ್ಞಾನೋದಯವಾದ ಬೋಧಗಯಾ ಜಗತ್ತಿನಲ್ಲಿ ಇರುವ ಬೌದ್ಧರಿಗೆ ಪವಿತ್ರ ಸ್ಥಳವಾಗಿದೆ. ಇದುವರೆಗೂ ಬೌದ್ಧ ಪರಂಪರೆಯ ಆಡಳಿತವನ್ನು ಸಂಪೂರ್ಣವಾಗಿ ಬೌದ್ಧರಿಗೆ ನೀಡಿಲ್ಲ ಎಂದು ಆರೋಪಿಸಿದರು.
ಸಂವಿಧಾನ ವಿರೋಧಿಯಾ ಬಿಟಿ ಕಾಯ್ದೆ–1949ರ ಅಡಿ ಆಡಳಿತ ಮಂಡಳಿಯೊಳಗೆ ಸೇರಿಸಿ ಹಿಂದೂ ಪುರೋಹಿತರು ಬೌದ್ಧರ ಇತಿಹಾಸ ಮತ್ತು ಸಂಸ್ಕೃತಿ ನಾಶ ಮಾಡಲು ಯತ್ನಿಸುತ್ತಿದ್ದಾರೆ. ಬುದ್ಧನ ವಿಗ್ರಹದ ಮುಂದೆ ಶಿವಲಿಂಗ ಇದೆ ಎಂದು ಸುಳ್ಳು ಹೇಳಿ, ಬುದ್ಧ ವಿಹಾರದ ಆವರಣದಲ್ಲಿ ಗಣಪತಿ ವಿಗ್ರಹ ಇರಿಸಿದ್ದಾರೆ ಎಂದು ಆರೋಪಿಸಿದರು. ಬೋಧಗಯಾದಲ್ಲಿನ ಸಂವಿಧಾನ ಬಾಹಿರ ನಡೆಗಳ ಬಗ್ಗೆ ಸಂಘಟನೆಗಳು ಬಿಹಾರ ಸರ್ಕಾರ ಮತ್ತು ಪ್ರಧಾನಿಯ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಹೀಗಾಗಿ, ದೇಶದಾದ್ಯಂತ ಈ ಬಗ್ಗೆ ಗಮನ ಸೆಳೆದು ಸರ್ಕಾರದ ಮೇಲೆ ಒತ್ತಡ ತರಲು ಸಂವಿಧಾನ ದಿನಾಚರಣೆಯಾದ ಇಂದು ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿ, ಪ್ರಧಾನ ಮಂತ್ರಿ ರಾಷ್ಟ್ರಪತಿಯವರಿಗೆ ಮನವಿ ಸಲ್ಲಿಸಲಾಗುತ್ತಿದೆ ಎಂದರು.
ಈ ಸಂಬಂಧ ಶಿರಸ್ತೇದಾರ್ ರಾಜು ಅವರಿಗೆ ಮನವಿ ಸಲ್ಲಿಸಿದರು. ಬಸವರಾಜು ದೇವರಸನಹಳ್ಳಿ, ಸಿದ್ದರಾಜು ಶಂಕರಪುರ, ಬೊಕ್ಕಹಳ್ಳಿ ಲಿಂಗಯ್ಯ, ಜಯಶಂಕರ್ ಕಾರ್ಯ ಸೇರಿದಂತೆ ಇತರರಿದ್ದರು