ನವದೆಹಲಿ: ರಾಷ್ಟ್ರಪತಿ ಭವನದಲ್ಲಿರುವ ದರ್ಬಾರ್ ಹಾಲ್ ಮತ್ತು ಅಶೋಕ್ ಹಾಲ್ ಸಭಾಂಗಣಗಳನ್ನು ಕ್ರಮವಾಗಿ ‘ಗಣತಂತ್ರ ಮಂಟಪ’ ಮತ್ತು ‘ಅಶೋಕ ಮಂಟಪ’ ಎಂದು ಮರುನಾಮಕರಣ ಮಾಡಲಾಗಿದೆ.
ರಾಷ್ಟ್ರಪತಿ ಭವನವನ್ನು ಮತ್ತಷ್ಟು ಜನಸ್ನೇಹಿಯಾಗಿಸುವ ಪ್ರಯತ್ನವಾಗಿ ಮುರುನಾಮಕರಣ ಮಾಡಲಾಗಿದೆ ಎಂದು ರಾಷ್ಟ್ರಪತಿ ಕಚೇರಿ ಪ್ರಕಟಣೆಯ ಮೂಲಕ ತಿಳಿಸಿದೆ. ಗಣತಂತ್ರ ಮಂಟಪ ಮತ್ತು ಅಶೋಕ ಮಂಟಪವೆಂದು ಮರುನಾಮಕರಣ ಮಾಡಿರುವುದಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಸಂತಸ ವ್ಯಕ್ತಪಡಿಸಿದ್ದಾರೆ.
ಭಾರತೀಯ ಸಾಂಸ್ಕೃತಿಕ ಮೌಲ್ಯಗಳು ಮತ್ತು ನೈತಿಕತೆಯನ್ನು ಪ್ರತಿಬಿಂಬಿಸುವ ಪ್ರಯತ್ನವಾಗಿ ದರ್ಬಾರ್ ಮತ್ತು ಹಾಲ್ ಪದವನ್ನು ಬದಲಾಯಿಸಲಾಗಿದೆ. ಭಾರತದ ರಾಜರ ಆಸ್ಥಾನಗಳಿಗೆ ಮತ್ತು ಬ್ರಿಟಿಷರ ನ್ಯಾಯಾಲಯಗಳಿಗೆ ದರ್ಬಾರ್ ಎಂದು ಕರೆಯಲಾಗುತ್ತಿತ್ತು. ದೇಶದಲ್ಲಿ ಪ್ರಜಾಪ್ರಭುತ್ವ ಸ್ಥಾಪನೆಯಾದ ಬಳಿಕ ದರ್ಬಾರ್ ಅರ್ಥ ಕಳೆದುಕೊಂಡಿದೆ. ಹಿಂದಿನಿಂದಲೂ ಭಾರತೀಯ ಸಮಾಜದಲ್ಲಿ ಗಣತಂತ್ರ ಪರಿಕಲ್ಪನೆ ಇದೆ. ಈ ಕಾರಣಕ್ಕಾಗಿ ದರ್ಬಾರ್ ಹಾಲ್‌ಗೆ ಗಣತಂತ್ರ ಮಂಟಪ ಎಂದು ಹೆಸರನ್ನು ಇಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಅಶೋಕ ಹಾಲ್ ಸಾಂಸ್ಕೃತಿಕ ಸಭಾಂಗಣವಾಗಿದೆ. ಚಕ್ರವರ್ತಿ ಅಶೋಕನನ್ನು ಸೂಚಿಸುವುದರಿಂದ ಏಕತೆ ಮತ್ತು ಶಾಂತಿಯುತ ಸಹಬಾಳ್ವೆಯ ಸಂಕೇತವಾಗಿದೆ. ಅಶೋಕ ಪದ ಎಲ್ಲಾ ದುಃಖಗಳಿಂದ ಮುಕ್ತ’ ಅಥವಾ ಯಾವುದೇ ದುಃಖದಿಂದ ದೂರವಿರುವ ವ್ಯಕ್ತಿಯನ್ನು ಸೂಚಿಸುತ್ತದೆ. ಆಂಗ್ಲೀಕರಣದ ಕುರುಹುಗಳನ್ನು ತೆಗೆದುಹಾಕಲು ಹಾಲ್ ಪದವನ್ನು ತೆಗೆದು ಹಾಕಲಾಗಿದೆ ಎಂದು ಹೇಳಿದೆ.
ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬ್ರಿಟಿಷರು ಇಟ್ಟ ಹಲವಾರು ಹೆಸರುಗಳನ್ನು ಮರು ನಾಮಕರಣ ಮಾಡಲಾಗಿದೆ. ಆದರೆ ರಾಷ್ಟ್ರಪತಿ ಭವನದ ಹೆಸರು ಬದಲಾವಣೆ ದ್ರೌಪದಿ ಮುರ್ಮು ಅವರ ಸ್ವತಂತ್ರ ನಿರ್ಧಾರವಾಗಿದ್ದು ಇದರಲ್ಲಿ ಕೇಂದ್ರ ಸರ್ಕಾರ ಪಾತ್ರವಿಲ್ಲ.