ಬೆಂಗಳೂರು: “ನಟ್ಟು-ಬೋಲ್ಟು ಟೈಟ್ ಮಾಡುತ್ತೇನೆ” ಎಂದು ಹೇಳುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಚುನಾವಣೆಯಲ್ಲಿ ಜನರೇ ನಟ್ಟು-ಬೋಲ್ಟು ಟೈಟ್ ಮಾಡುತ್ತಾರೆ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ವ್ಯಂಗ್ಯವಾಡಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟದ ಖಾತೆ ಹಂಚಿಕೆ ಮತ್ತು ಆಡಳಿತದ ಜವಾಬ್ದಾರಿ ಸರ್ಕಾರ ಹಾಗೂ ಕಾಂಗ್ರೆಸ್ ಪಕ್ಷದ್ದೇ ಆಗಿದ್ದು, ಒಳಜಗಳಗಳು ರಾಜ್ಯದ ಆಡಳಿತದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತವೆ ಎಂದು ಹೇಳಿದರು. “ನಟ್ಟು-ಬೋಲ್ಟು ಟೈಟ್ ಮಾಡುತ್ತೇನೆ ಎನ್ನುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ, ಜನರೇ ಸೂಕ್ತ ಉತ್ತರ ನೀಡುತ್ತಾರೆ” ಎಂದರು.
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರಿಗೆ ರಾಜ್ಯಸಭೆ ಟಿಕೆಟ್ ಸಿಗದ ವಿಚಾರವಾಗಿ ಕಾಂಗ್ರೆಸ್ ಟೀಕೆ ಮಾಡುತ್ತಿರುವುದಕ್ಕೂ ಸಿ.ಟಿ. ರವಿ ತಿರುಗೇಟು ನೀಡಿದರು. “ಕಾಂಗ್ರೆಸ್‌ಗೆ ಇದ್ದಕ್ಕಿದ್ದಂತೆ ದೇವೇಗೌಡರ ಮೇಲೆ ಮಮಕಾರ ಏಕೆ ಬಂದಿದೆ? ಅವರ ಬಗ್ಗೆ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಹಜವಾದ ಗೌರವವಿದೆ. ದೇವೇಗೌಡರನ್ನು ಹೇಗೆ ಗೌರವಿಸಬೇಕು ಎಂಬ ಪಾಠವನ್ನು ಕಾಂಗ್ರೆಸ್‌ನಿಂದ ಕಲಿಯಬೇಕಿಲ್ಲ” ಎಂದು ಹೇಳಿದರು. ಕಾಂಗ್ರೆಸ್ ತನ್ನ ಹಿರಿಯ ನಾಯಕರನ್ನು ನಡೆಸಿಕೊಂಡ ರೀತಿಯನ್ನೂ ಅವರು ಪ್ರಶ್ನಿಸಿದರು.



