ನವದೆಹಲಿ: ಇಂದು ಸಂಸತ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ರಾಷ್ಟ್ರಪತಿಗಳಿಗೆ ವಂದನಾ ನಿರ್ಣಯದ ಮೇಲೆ ಮಾತನಾಡಿದರು. ಪ್ರಧಾನಿಯವರು ಭಾಷಣ ಪ್ರಾರಂಭ ಮಾಡುತ್ತಿದ್ದಂತೆಯೇ ವಿಪಕ್ಷ ನಾಯಕರು ಸಿಡಿದೆದ್ದರು. ಅಲ್ಲದೇ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸುವಂತೆ ರಾಹುಲ್ ಗಾಂಧಿಯವರು ತಮ್ಮ ನಾಯಕರಿಗೆ ಸೂಚಿಸಿದ್ದಾರೆ. ಈ ಮೂಲಕ ಪ್ರಧಾನಿ ಭಾಷಣಕ್ಕೆ ತಡೆಯೊಡ್ಡಲು ಮುಂದಾದರು.
ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಮಂಗಳವಾರ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ತರಾಟೆಗೆ ತೆಗೆದುಕೊಂಡರು. ಸದನದಲ್ಲಿ ಮಾತನಾಡಲು ಸಾಕಷ್ಟು ಅವಕಾಶ ಮತ್ತು ಸಮಯವನ್ನು ನೀಡಲಾಗಿದೆ ಎಂದು ಹೇಳಿದರು. ಅಲ್ಲದೇ ಸಂಸತ್ತಿನ ಘನತೆಯನ್ನು ಕಾಪಾಡಿಕೊಳ್ಳುವಂತೆ ರಾಗಾಗೆ ಸ್ಪೀಕರ್ ತಿಳಿಸಿದರು.
ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಮಾತನಾಡಿ ಆತ್ಮೀಯ ವಿರೋಧ ಪಕ್ಷದ ನಾಯಕರೇ, ಇದು ನಿಮಗೆ ಸರಿಹೊಂದುವುದಿಲ್ಲ. ನಿಮಗೆ ಸಾಕಷ್ಟು ಅವಕಾಶಗಳು ಮತ್ತು ಸಮಯವನ್ನು ನೀಡಲಾಗಿದೆ. ಸಭಾನಾಯಕರು ಮಾತನಾಡುವಾಗ ಸದನದಲ್ಲಿ ನಿರ್ದೇಶನ ನೀಡುತ್ತಿರುವುದು ನಿಮಗೆ ಶೋಭೆ ತರಲ್ಲ. ಸಂಸತ್ತಿನ ಸಂಪ್ರದಾಯಗಳ ಪ್ರಕಾರ ಇದು ಸೂಕ್ತವಲ್ಲ. ಸಂಸತ್ತಿನ ಘನತೆ ಕಾಪಾಡಿ. ಸದಸ್ಯರನ್ನು ಸದನದ ಬಾವಿಗೆ ಬರುವಂತೆ ನಿರ್ದೇಶಿಸುತ್ತಿದ್ದೀರಾ? ಇದಕ್ಕಾಗಿ ನೀವು ವಿರೋಧ ಪಕ್ಷದ ನಾಯಕರಾಗಿದ್ದೀರೇ? ಎಂದು ಬಿರ್ಲಾ ಅವರು ರಾಗಾಗೆ ಛೀಮಾರಿ ಹಾಕಿದರು.