ಮದ್ದೂರು: ತಾಲೂಕು ಕಚೇರಿಯಲ್ಲಿ ಕರ್ತವ್ಯಕ್ಕೆ ನಿಗದಿತ ಸಮಯಕ್ಕೆ ಹಾಜರಾಗದ ನೌಕರರು. ಆಧಾರ್ ಸೇವೆ ವಿಳಂಬ,ದಾಖಲಾತಿಗಾಗಿ ರೈತರ ಅಲೆದಾಟ, ಶುಚಿತ್ವ ಇಲ್ಲದ ಆವರಣ ಜೊತೆಗೆ ನೌಕರರ ನಿರ್ಲಕ್ಷ್ಯ ಜಿಲ್ಲಾಧಿಕಾರಿ ಅವರಿಗೆ ಕಂಡುಬಂದಿತು.
ಜಿಲ್ಲಾಧಿಕಾರಿ ಡಾ. ಕುಮಾರ ಮತ್ತು ಅಪರ ಜಿಲ್ಲಾಧಿಕಾರಿ ಡಾ.ಎಚ್ ಎಲ್ ನಾಗರಾಜ್ ಪಟ್ಟಣದಲ್ಲಿ ತಾಲೂಕು ಕಚೇರಿಗೆ ಮಂಗಳವಾರ ಬೆಳಿಗ್ಗೆ ಭೇಟಿ ನೀಡಿ ನೌಕರರ ಕಾರ್ಯವೈಖರಿ ಪರಿಶೀಲಿಸಿದಾಗ ಸರಕಾರಿ ಸೇವೆಯಲ್ಲಿ ಬೇಜವಾಬ್ದಾರಿತನ ಬೆಳಕಿಗೆ ಬಂದಿತು.
ಕಚೇರಿ ಆರಂಭದ ಸಮಯಕ್ಕೆ ಉಭಯ ಅಧಿಕಾರಿಗಳು ತಾಲೂಕು ಕಚೇರಿಗೆ ಭೇಟಿ ನೀಡಿದಾಗ ಹಲವು ನೌಕರರು ಕರ್ತವ್ಯಕ್ಕೆ ಹಾಜರಾಗಿರಲಿಲ್ಲ, ಸರಿಯಾದ ಸಮಯಕ್ಕೆ ಕೆಲಸಕ್ಕೆ ಹಾಜರಾಗದ ನೌಕರರ ವಿರುದ್ಧ ಗರಂ ಆದ ಜಿಲ್ಲಾಧಿಕಾರಿ ಹಾಜರಾತಿ ಪುಸ್ತಕವನ್ನು ಪರಿಶೀಲಿಸಿ ಸೂಕ್ತ ಕ್ರಮ ವಹಿಸುವಂತೆ ತಹಸಿಲ್ದಾರ್ ನರಸಿಂಹಮೂರ್ತಿಗೆ ಸೂಚಿಸಿದರು.
ಇದೇ ವೇಳೆ ಆಧಾರ್ ಕಾರ್ಡ್ ತಿದ್ದುಪಡಿಗೆ ಬಂದಿದ್ದ ಸಾರ್ವಜನಿಕರ ಗುಂಪಿನ ಕಡೆ ತೆರಳಿದ ಜಿಲ್ಲಾಧಿಕಾರಿ ಮತ್ತು ಅಪರ ಜಿಲ್ಲಾಧಿಕಾರಿ ಸಾರ್ವಜನಿಕರಿಂದ ಇಷ್ಟು ಸಮಯವಾದರೂ ಕೇಂದ್ರದಲ್ಲಿ ಕೆಲಸ ಆರಂಭಗೊಳ್ಳದಿರುವ ಬಗ್ಗೆ ವಿಚಾರ ತಿಳಿದರು.
ಬೆಳಿಗ್ಗೆ 10 ಗಂಟೆಯಾದರೂ ಆಧಾರ್ ಕಾರ್ಡ್ ಪ್ರಕ್ರಿಯೆ ಪ್ರಾರಂಭಿಸದ ಸಿಬ್ಬಂದಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಅವ್ಯವಸ್ಥೆ ಸರಿಪಡಿಸಿ ನಿಗದಿತ ಸಮಯಕ್ಕೆ ಸಾರ್ವಜನಿಕರ ಕೆಲಸ ವನ್ನು ಮಾಡಿ ಕೊಡಿ, ಸರ್ಕಾರದ ಗ್ಯಾರಂಟಿ ಸವಲತ್ತು ಪಡೆಯಲು ಆಧಾರ್ ಸೇರಿದಂತೆ ಇತರ ದಾಖಲಾತಿಗಾಗಿ ಜನತೆ ಬರುತ್ತಾರೆ, ಸಕಾಲದಲ್ಲಿ ಅವರಿಗೆ ಕೆಲಸ ಮಾಡಿಕೊಡಿ ಎಂದು ಹೇಳಿದರು.
ಕಚೇರಿಯಲ್ಲಿ ಕಾಯ್ದು ಕುಳಿತಿದ್ದ ಬಸವೇಗೌಡ ಎಂಬುವವರ ಬಳಿ ತೆರಳಿದ ಅಧಿಕಾರಿಗಳು ಆತನಿಂದ ಮಾಹಿತಿ ಪಡೆದಾಗ ರೆಕಾರ್ಡ್ ಕೊಠಡಿಯಲ್ಲಿ ಎರಡು ತಿಂಗಳಿಂದ ದಾಖಲಾತಿಯನ್ನು ಹುಡುಕಿಕೊಡದೆ ಅಲೆದಾಡಿಸುತ್ತಿದ್ದಾರೆ ಎಂಬ ಮಾಹಿತಿ ಹೊರ ಬಿದ್ದಿತ್ತು.
ರೆಕಾರ್ಡ್ ರೂಂ ನೌಕರರ ವಿರುದ್ಧ ವಿರುದ್ಧ ಕಿಡಿ ಕಾರಿದ ಜಿಲ್ಲಾಧಿಕಾರಿ ನಿಗದಿತ ಸಮಯದೊಳಗೆ ದಾಖಲಾತಿಯನ್ನು ನೀಡಬೇಕೆಂಬ ನಿಯಮಾವಳಿ ಇದೆ, ಆದರೆ ಇಲ್ಲಿ ದಾಖಲಾತಿ ನೀಡದೆ ವಿಳಂಬ ಮಾಡಿರುವುದು ಕಂಡು ಬಂದಿದೆ ಈ ತಕ್ಷಣ ರೆಕಾರ್ಡ್ ಕೊಠಡಿಯ ಸಂಬಂಧಿಸಿದ ಅಧಿಕಾರಿಗೆ ನೋಟಿಸ್ ಜಾರಿ ಮಾಡುವಂತೆ ತಹಸಿಲ್ದಾರ್ ರಿಗೆ ತಾಕೀತು ಮಾಡಿದರು
ಅಪಾರ ಜಿಲ್ಲಾಧಿಕಾರಿ ಡಾ. ಎಚ್. ಎಲ್ ನಾಗರಾಜ್ ಕಚೇರಿ ಆವರಣ ಪರಿಶೇಲಿಸಿದ ವೇಳೆ ಶುಚಿತ್ವ ಇಲ್ಲದನ್ನು ಗಮನಿಸಿ ತಾಲೂಕು ಕಚೇರಿ ಆವರಣವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವಂತೆ ತಹಸಿಲ್ದಾರ್ ಗೆ ತಿಳಿಸಿದರು.
