ಮೈಸೂರು: ಮೈಸೂರು ಸಂಸ್ಕೃತಿಕ ನಗರ ಎಂದೇ ಖ್ಯಾತಿ ಪಡೆದಿದೆ. ವಿಶ್ವವಿಖ್ಯಾತ ಮೈಸೂರು ದಸರಾ ಆಚರಣೆ ೨೦೨೩ಕ್ಕೆ ಅ.೧೫ ರಂದು ಚಾಲನೆ ದೊರೆಯಲಿದೆ. ದಸರಾ ಆಚರಣೆಯನ್ನು ಸಾಂಪ್ರದಾಯಿಕ ಮತ್ತು ಕ್ರಮಬದ್ಧವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಮೈಸೂರು ಬ್ರಾಂಡ್ ಹೆಸರಿನಲ್ಲಿ ಜಿಲ್ಲಾಡಳಿತ ಸ್ಟ್ರೀಟ್ ಫೆಸ್ಟಿವಲ್ ನಡೆಸಲು ಮುಂದಾಗಿದೆ.
ಈ ಹಿಂದೆ ನಡೆದಿದ್ದ ಸ್ಟ್ರೀಟ್ ಫೆಸ್ಟಿವಲ್ ವಿವಾದ ಎಬ್ಬಿಸಿತ್ತು. ಯುವತಿಯರ ಜೊತೆ ಪುಂಡರು ಅಸಭ್ಯವಾಗಿ ವರ್ತಿಸಿದ್ದರು. ಇದರಿಂದ ಜನರು ಆಕ್ರೋಶಗೊಂಡು ಪಾಶ್ಚಿಮಾತ್ಯ ಸಂಸ್ಕೃತಿ ನಮ್ಮಲ್ಲಿ ಬೇಡ ಎಂಬ ವಿರೋಧ ವ್ಯಕ್ತಪಡಿಸಿದ್ದರು. ಸಾಂಪ್ರದಾಯಿಕ ದಸರಾ ನಡೆಸಿ ಎಂಬ ಕೂಗು ಎದ್ದಿತ್ತು. ಈದಾದ ಬಳಿಕ ಜಿಲ್ಲಾಡಳಿತ ಸ್ಟ್ರೀಟ್ ಫೆಸ್ಟಿವಲ್ ಕಾರ್ಯಕ್ರಮಕ್ಕೆ ಕೋಕ್ ನೀಡಿದೆ.
ಆದರೆ ಇದೀಗ ಮತ್ತೆ ಸ್ಟ್ರೀಟ್ ಫೆಸ್ಟಿವಲ್ ನಡೆಸಲು ಅನುಮತಿ ನೀಡುವಂತೆ ಸರ್ಕಾರಕ್ಕೆ ಜಿಲ್ಲಾಡಳಿತ ಪ್ರಸ್ತಾವನೆ ಸಲ್ಲಿಸಲು ಸಿದ್ಧವಾಗಿದೆ. ಪ್ರವಾಸೋದ್ಯಮ ಇಲಾಖೆ ವತಿಯಿಂದ ಅ. ೨೨ ರಂದು ಮಧ್ಯಾಹ್ನ ೩ ಗಂಟೆಯಿಂದ ರಾತ್ರಿ ೧೧ ಗಂಟೆಯವರೆಗೆ ಸ್ಟ್ರೀಟ್ ಫೆಸ್ಟಿವಲ್ ನಡೆಸಲು ಪ್ಲಾನ್ ಮಾಡಿದೆ. ಈ ಮೂಲಕ ಜಿಲ್ಲಾಡಳಿತ ಸಾಂಪ್ರದಾಯಿಕ ದಸರಾಗೆ ಎಳ್ಳು ನೀರು ಬಿಡುತ್ತಾ? ಅಥವಾ ತಾನೇ ಬಹಿಷ್ಕರಿಸಿದ ಕಾರ್ಯಕ್ರಮಕ್ಕೆ ಮರು ಚಾಲನೆ ನೀಡುತ್ತಾ? ಎಂಬ ಪ್ರಶ್ನೆ ಉದ್ಭವವಾಗಿದೆ.