ಮೈಸೂರು : ವಿಶ್ವವಿಖ್ಯಾತ ದಸರಾ ಮಹೋತ್ಸವದಲ್ಲಿ ಪರಂಪರಾಗತವಾಗಿ ಪ್ರಮುಖ ಆಕರ್ಷಣೆಯಾಗಿ ನಡೆದುಕೊಂಡು ಬಂದಿರುವ ದಸರಾ ಕುಸ್ತಿ ಈ ಬಾರಿ ಅಕ್ಟೋಬರ್ ೧೫ ರಿಂದ ಅ. ೨೧ರವರೆಗೆ ನಡೆಯಲಿದೆ ಎಂದು ದಸರಾ ಕುಸ್ತಿ ಉಪಸಮಿತಿಯ ವಿಶೇಷಾಧಿಕಾರಿ ಹಾಗೂ ಅಪರ ಪೊಲೀಸ್ ಅಧೀಕ್ಷಕರಾದ ನಂದಿನಿ ಮಾಹಿತಿ ನೀಡಿದರು.
ಬುಧವಾರ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಈಗಾಗಲೇ ವಸ್ತು ಪ್ರದರ್ಶನ ಆವರಣದ ಪಕ್ಕದಲ್ಲಿರುವ ಕಾಳಿಂಗರಾವ್ ಕುಸ್ತಿ ಅಖಾಡದಲ್ಲಿ ದಸರಾ ಕುಸ್ತಿಗೆ ಜೋಡಿ ಕಟ್ಟುವ ಕೆಲಸ ಮಾಡಲಾಗಿದೆ. ನಾಡ ಕುಸ್ತಿ, ಪಾಯಿಂಟ್ ಕುಸ್ತಿ ಹಾಗೂ ಪಂಜ ಕುಸ್ತಿಗಳನ್ನು ಆಯೋಜನೆ ಮಾಡಲಾಗಿದೆ. ಪ್ರತಿನಿತ್ಯ ಬೆಳಗ್ಗೆಯಿಂದ ಸಂಜೆವರೆಗೆ ೩೦ ಕ್ಕೂ ಹೆಚ್ಚು ಕುಸ್ತಿ ಪಂದ್ಯಾವಳಿಗಳು ನಡೆಯಲಿವೆ ಎಂದು ತಿಳಿಸಿದರು.
ಕುಸ್ತಿ ಜೋಡಿ ಕಟ್ಟುವ ಸಂದರ್ಭದಲ್ಲಿ ೨೨೦ ಜೋಡಿಗಳನ್ನು ಗುರುತಿಸಲಾಗಿದ್ದು, ಪ್ರತಿಯೊಂದು ಪಂದ್ಯಗಳು ಕಾಳಿಂಗರಾವ್ ಕುಸ್ತಿ ಅಖಾಡದಲ್ಲಿ ನಡೆಯಲಿವೆ. ಕುಸ್ತಿ ಪಂದ್ಯಾವಳಿಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಸ್ಥಳೀಯ ಕುಸ್ತಿಪಟುಗಳಿಗೆ ಪ್ರೇರಣೆ ಹಾಗು ಸ್ಪೂರ್ತಿ ನೀಡುವುದಕ್ಕಾಗಿ ಹೊರ ರಾಜ್ಯಗಳಿಂದ ಮೂರು ಕುಸ್ತಿ ಪಟುಗಳನ್ನು ಕರೆಯಲಾಗಿದೆ ಎಂದು ವಿವರಿಸಿದರು
ಪಂಜ ಕುಸ್ತಿ ಅ.೧೮ ರಂದು ಕೇವಲ ಒಂದು ದಿನ ನಡೆಯಲಿದ್ದು, ಮಹಿಳೆಯರ ವಿಭಾಗ, ಪುರಷರ ವಿಭಾಗ ಹಾಗು ವಿಶೇಷ ಚೇತನರ ವಿಭಾಗ ಈ ರೀತಿ ನಡೆಯಲು ಸಿದ್ದತೆ ಮಾಡಿಕೊಳ್ಳಲಾಗಿದೆ. ಈ ಮೂರು ವಿಭಾಗದಲ್ಲಿ ಉತ್ತಮ ಪ್ರದರ್ಶನ ನೀಡಿದರಿಗೆ ಟ್ರೋಫಿಗಳು ಮತ್ತು ಇನ್ನುಳಿದಂತೆ ಪ್ರಥಮ, ದ್ವಿತೀಯ, ತೃತೀಯ ಎಂದು ಪದಕದ ಜೊತೆ ಪ್ರಮಾಣಪತ್ರ ನೀಡಲಾಗುವುದು ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಂದಿನಿ ಹೇಳಿದರು.