ಮೈಸೂರು: ನಗರದೆಲ್ಲೆಡೆ ದಸರಾ ಸಂಭ್ರಮ ಕಳೆಗಟ್ಟಿದೆ. ನಾಡಹಬ್ಬದ ಅಂಗವಾಗಿ ಚಾಮುಂಡಿ ಬೆಟ್ಟದಲ್ಲಿ ದುರ್ಗಾ ನಮಸ್ಕಾರ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ನೂರಕ್ಕೂ ಹೆಚ್ಚು ಜನರು ದುರ್ಗಾ ನಮಸ್ಕಾರ ಮತ್ತು ಯೋಗಚಾರಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆದರೆ ಉದ್ಘಾಟನೆಗೆ ಬರಬೇಕಿದ್ದ ಸ್ಥಳೀಯ ಶಾಸಕ ಜಿ.ಟಿ ದೇವೇಗೌಡ ಗೈರಾಗಿದ್ದರು.
ನಾಡಹಬ್ಬ ದಸರಾ ಕಾರ್ಯಕ್ರಮಗಳು ಕೊನೆಯ ಹಂತಕ್ಕೆ ಬಂದಿದೆ. ಇಂದು ವಿವಿಧ ಪ್ರೋಗ್ರಾಂಗಳು ಮುಕ್ತಾಯಗೊಳ್ಳಲಿದೆ. ಅ. ೧೫ರಂದು ನಾಡ ಅಧಿದೇವತೆ ಚಾಮುಂಡೇಶ್ವರಿಯ ಸನ್ನಿಧಿಯಲ್ಲಿ ದಸರಾಗೆ ಚಾಲನೆ ನೀಡಲಾಗಿತ್ತು. ಇಂದು ನವರಾತ್ರಿಯ ಎಂಟನೇ ದಿನ. ಎಲ್ಲಾ ಸಾಂಸ್ಕೃತಿಕ ಮತ್ತು ಇತರೆ ಕಾರ್ಯಕ್ರಮಗಳು ಇಂದಿಗೆ ಮುಕ್ತಾಯಗೊಳ್ಳಲಿದೆ.
ದಸರಾ ಹಿನ್ನೆಲೆ ಚಾಮುಂಡಿ ಬೆಟ್ಟದಲ್ಲಿರುವ ಉತ್ಸವ ಮೂರ್ತಿಗೆ ೯ ದಿನ ವಿಶೇಷ ಅಲಂಕಾರವನ್ನು ಸಹ ಮಾಡಲಾಗುತ್ತಿದೆ. ನವರಾತ್ರಿಯ ಈ ೯ ದಿನಗಳು ಅರಮನೆಯಲ್ಲಿ ನಡೆಯುವ ಧಾರ್ಮಿಕ ಕೈಂಕರ್ಯಗಳ ರೀತಿಯಲ್ಲೇ ಚಾಮುಂಡೇಶ್ವರಿ ದೇವಾಲಯದಲ್ಲೂ ನಡೆಯುತ್ತದೆ. ನಿತ್ಯ ಬೆಳಗ್ಗೆ ಮೂಲ ಚಾಮುಂಡಿ ತಾಯಿಗೆ ಅಭಿಷೇಕ, ಹೋಮ-ಹವನಗಳು, ಚಕ್ರಪೂಜೆ, ವಿಶೇಷ ಅಲಂಕಾರ ಹಾಗೂ ಉತ್ಸವ ಮೂರ್ತಿಯನ್ನು ಚಾಮುಂಡಿ ಬೆಟ್ಟದ ಸುತ್ತಲೂ ಉತ್ಸವ ನೆರವೇರಿಸಲಾಗುತ್ತದೆ. ಉತ್ಸವ ಮೂರ್ತಿಯನ್ನು ಭಕ್ತರ ದರ್ಶನಕ್ಕೆ ವಿಶೇಷ ಅಲಂಕಾರ ಮಾಡಲಾಗುತ್ತದೆ. ಅ.೨೪ ರಂದು ದಸರಾ ಜಂಬೂ ಸವಾರಿ ಮೆರವಣಿಗೆ ಸಾಗಲಿದ್ದು, ಅದಕ್ಕಾಗಿ ಭರದ ಸಿದ್ಧತೆ ಕೂಡ ನಡೆದಿದೆ.