Tuesday, April 29, 2025
Google search engine

Homeರಾಜ್ಯಸುದ್ದಿಜಾಲಕೆ.ಆರ್.ನಗರ ತಾಲೂಕಿನಲ್ಲಿ ವಿವಿಧೆಡೆ ನವರಾತ್ರಿ ಹಬ್ಬದ ಅಂಗವಾಗಿ ದೇವಸ್ಥಾನ, ಮನೆಮನೆಗಳಲ್ಲಿ ದಸರಾ ಬೊಂಬೆ ಪ್ರದರ್ಶನ

ಕೆ.ಆರ್.ನಗರ ತಾಲೂಕಿನಲ್ಲಿ ವಿವಿಧೆಡೆ ನವರಾತ್ರಿ ಹಬ್ಬದ ಅಂಗವಾಗಿ ದೇವಸ್ಥಾನ, ಮನೆಮನೆಗಳಲ್ಲಿ ದಸರಾ ಬೊಂಬೆ ಪ್ರದರ್ಶನ

ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ನಾಡಹಬ್ಬ ದಸರಾ ಸಂದರ್ಭ ದಲ್ಲಿ ಬೊಂಬೆ ಪ್ರದರ್ಶನ ವಿಶೇಷ ಆಕರ್ಷಣೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ನಿರ್ಮಿ ಸಿದ ಇತಿಹಾಸ ಪ್ರಸಿದ್ದ ಎಡತೊರೆಯ ಕೃಷ್ಣರಾಜ ನಗರ ಪಟ್ಟಣ(ಕೆ.ಆರ್.ನಗರ) ಹಾಗೂ ತಾಲೂಕಿನ ವಿವಿದೆಡೆ ನವರಾತ್ರಿ ಹಬ್ಬದ ಅಂಗವಾಗಿ ದೇವಸ್ಥಾನ, ಮನೆಮನೆಗಳಲ್ಲಿ ವಿಶೇಷವಾಗಿ ದಸರಾ ಬೊಂಬೆಗಳ ಪ್ರದರ್ಶನ ನಡೆಯುತ್ತಿದೆ.

ತಾಲೂಕಿನ ಹೆಬ್ಬಾಳು ಗ್ರಾಮದ: ಪುರೋಹಿತರು ಮತ್ತು ಜ್ಯೋತಿಷ್ಯಕಾರರು ಆದ ಸುರೇಶ್ ಕಶ್ಯಪ್ ಮತ್ತು ಅವರ ಧರ್ಮಪತ್ನಿ ಶಿಕ್ಷಕಿ, ನಿರೂಪಕಿ, ಹಾಗೂ ಕವಯಿತ್ರಿ ಭಾರತಿ ಸುರೇಶ್ ಅವರು ತಮ್ಮ ಮನೆಯಲ್ಲಿ ಕಳೆದ ೩೦ ವರ್ಷಗಳಿಂದ ಗ್ರಾಮೀಣ ಪ್ರದೇಶ ಹೆಬ್ಬಾಳು ಗ್ರಾಮದಲ್ಲಿ ದಸರಾ ಬೊಂಬೆಗಳ ಪ್ರದರ್ಶನ ಸಂಪ್ರದಾಯ ಆಚರಿಸಿಕೊಂಡು ಬರುತ್ತಿದ್ದಾರೆ. ನವರಾತ್ರಿಯ ಪ್ರಾರಂಭದ ದಿನದಿಂದ ಮನೆಯಲ್ಲಿ ೯ ಹಂತಗಳಲ್ಲಿ ಗೊಂಬೆ ಜೋಡಣೆ ಮಾಡಿ, ಪ್ರತಿದಿನ ಬೆಳಿಗ್ಗೆ ದೇವಿ ಮಹಾತ್ಮೆ ಪಾರಾಯಣ ಮಾಡಿ, ಸಂಜೆ ಆರತಿ ಮಾಡಿ ಪ್ರತಿದಿನವೂ ಒಂದೊಂದು ಬಗೆಯ ತಿಂಡಿ ನೀಡುವುದು ವಿಶೇಷ.

ಕಣ್ಮನ ಸೆಳೆಯುವ ಗೊಂಬೆ ಜೋಡಣೆ : ನಮ್ಮ ಭಾರತೀಯ ಪರಂಪರೆಯಲ್ಲಿ ನವರಾತ್ರಿ ಹಿಂದೂಗಳ ಅತ್ಯಂತ ಭಕ್ತಿ ಶ್ರದ್ದೆಗಳ ಪ್ರತೀಕವಾದ ಹಬ್ಬ.ನವದಿನಗಳಂದು ನವವಿದ ರೂಪಗಳಲ್ಲಿ, ನವದೇವಿಯರನ್ನು ಆರಾಧಿಸುವ ಹಬ್ಬವೇ ನವರಾತ್ರಿ.ಈ ಹಬ್ಬದ ವೈಶಿಷ್ಟ್ಯ ಎಂದರೆ ಗೊಂಬೆ ಜೋಡಣೆಯಲ್ಲಿ ವಿವಿಧ
ವಿವಿಧ ಶೈಲಿಯ ಗಣಪನ ಮೂರ್ತಿಗಳು, ಪಟ್ಟದ ಗೊಂಬೆಗಳು, ದಶಾವತಾರ, ಸಾಧುಸಂತರು, ಪೌರಾಣಿಕ ಗೊಂಬೆಗಳು, ಮಕ್ಕಳಿಗೆ ಸಂಸ್ಕೃತಿ ಮತ್ತು ಪರಂಪರೆ ಯನ್ನು ತಿಳಿಸಿ, ಉಳಿಸಿ ಬೆಳೆಸಲು ಸಹಕಾರಿಯಾಗುತ್ತದೆ.

ಕೈಲಾಸ ಪರ್ವತದಲ್ಲಿ ಶಿವ ಪಾರ್ವತಿ, ಕ್ಷೀರ ಸಾಗರದಲ್ಲಿ ಲಕ್ಷ್ಮೀ ನಾರಾಯಣರು, ಶ್ರೀ ಕೃಷ್ಣನ ಲೀಲೆಗಳು, ವಿವಿಧ ಪ್ರಾಂತೀಯ ಶೈಲಿಯ ವಧು ವರರ ಗೊಂಬೆಗಳು , ಜಂಬೂಸವಾರಿ, ತಿರುಪತಿ, ತಲಕಾವೇರಿ ತೀರ್ಥೋದ್ಭವ ವಿಶೇಷವಾಗಿ ಗಮನ ಸೆಳೆಯುತ್ತಿವೆ.ಗಾದೆಗಳ ಲೋಕದಲ್ಲಿ ಗಾದೆಗಳನ್ನು ಸಾರುವ ಗೊಂಬೆಗಳ ವಿಭಿನ್ನ ಜೋಡಣೆ,ಅ ಭಯಾರಣ್ಯ, ತೆಂಗಿನ ಕಾಯಿ,ಬೆಲ್ಲ, ಕೊಬ್ಬರಿ ಕೆತ್ತನೆಗಳ ಜೋಡಣೆ ಇವರ ಕ್ರಿಯಾತ್ಮಕ ಪರಿಕಲ್ಪನೆ ಗಳಿಗೆ ಸಾಕ್ಷಿಯಾಗಿದೆ.

ಮಕ್ಕಳಾದ ಅಂಕಿತ ರಾಜ್ ಮತ್ತು ಡಾಕ್ಟರ್ ಆದಿತ್ಯಕಶ್ಯಪ್ ರ ಸಹಕಾರದೊಂದಿಗೆ ಪ್ರತಿವರ್ಷ ವೈಶಿಷ್ಟ್ಯ ಪೂರ್ಣವಾಗಿ ಆಚರಿಸುಕೊಂಡು ಬರುತ್ತಿದ್ದಾರೆ.ಪ್ರತಿದಿನ ಹಲವಾರು ಜನ ಗೊಂಬೆಗಳನ್ನು ವೀಕ್ಷಿಸುವ ಮೂಲಕ ಈ ವೈಭವವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.

ಪಟ್ಟಣದ ಸಿ.ಎಂ. ರಸ್ತೆಯಲ್ಲಿನ ಗಾಂಧಿ ಪಾರ್ಕ್ ಪಕ್ಕದಲ್ಲಿರುವ ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನದ ಅರ್ಚಕರಾದ ಶ್ರೀನಿವಾಸಭಟ್ ಅವರ ನೇತೃತ್ವದಲ್ಲಿ ನವರಾತ್ರಿ ಅಂಗವಾಗಿ ಏರ್ಪಡಿಸಿರುವ ಸಾವಿರಾರು ಬೊಂಬೆಗಳ ಪ್ರದರ್ಶನ ಜನರ ಕಣ್ಮನ ಸೆಳೆಯುತ್ತಿದೆ. ಗೊಂಬೆಗಳನ್ನು ವೀಕ್ಷಿಸುತ್ತಿರುವ ಸಾರ್ವಜನಿಕರು ಮೆಚ್ಚುಗೆ ಸೂಚಿಸಿ ಹರ್ಷ ವ್ಯಕ್ತಪಡಿಸುತ್ತಿದ್ದಾರೆ.

ತರಹೇವಾರಿ ಬೊಂಬೆಗಳು: ಪುರಾಣ ಪ್ರಸಿದ್ದ ರಾಮಾಯಣ ದರ್ಶನ, ಕೃಷ್ಣಲೀಲಾಮೃತ, ಲಕ್ಷ್ಮೀ, ಸರಸ್ವತಿ, ಶಾರದಾಂಬೆ, ಗಣೇಶ, ಪುರಾಣ ಪ್ರಸಿದ್ಧ ದೇಗುಲಗಳು, ರಾಜರ ಕಾಲದ ಆಳ್ವಿಕೆ, ಉಡುಗೆ-ತೊಡುಗೆಗಳನ್ನು ಬಿಂಬಿಸುವ ಬೊಂಬೆಗಳು, ನಂದನವನದಲ್ಲಿ ಗೋಪಾಲಕೃಷ್ಣ, ಪಟ್ಟದ ಆನೆ, ಜಂಬೂಸವಾರಿ, ಸುಂದರ ಉದ್ಯಾನವನಗಳು, ರಾಷ್ಟ್ರಪ್ರೇಮ ಬಿಂಬಿಸುವ ಮಹಾಮಹಿಮರ ಪ್ರತಿಮೆಗಳು, ಮರದ ಬೊಂಬೆಗಳು, ಹೀಗೆ ವೈವಿಧ್ಯಮಯ ಬೊಂಬೆಗಳನ್ನು ಪ್ರದರ್ಶನ ಕ್ಕಿಡಲಾಗಿದೆ. ಹಲವಾರು ವರ್ಷಗಳಿಂದ ಬೊಂಬೆಗಳನ್ನು ಪ್ರದರ್ಶನಕ್ಕೆ ಇಡುತ್ತಿದ್ದು, ನವರಾತ್ರಿ ಆರಂಭದ ದಿನದಿಂದ ಮುಂದಿನ ೩ ದಿನಗಳವರೆಗೆ ಬೊಂಬೆಗಳ ಪ್ರದರ್ಶನ ಇರುತ್ತದೆ. ಪ್ರತಿ ದಿನ ಬೆಳಿಗ್ಗೆ ೧೦ ಗಂಟೆಯಿಂದ ರಾತ್ರಿ ೮ ಗಂಟೆಯವರೆಗೆ ಬೊಂಬೆಗಳನ್ನು ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ.

ಪ್ರತಿ ವರ್ಷ ದಸರಾ ಬೊಂಬೆಗಳ ಪ್ರದರ್ಶನ ಮಾಡುತ್ತಿದ್ದೇವೆ. ಜನರು ಮೈಸೂರಿಗೆ ಹೋಗಿ ದಸರಾ ನೋಡುತ್ತಾರೆ. ನಾವಿಲ್ಲಿ ದಸರಾ ಬಿಂಬಿಸುವ ಬೊಂಬೆಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದೇವೆ. ನವರಾತ್ರಿಯ ಕೊನೆಯ ದಿನ ಎಲ್ಲಾ ಬೊಂಬೆಗಳನ್ನೂ ಪಲ್ಲಕ್ಕಿಯಲ್ಲಿ ಕೂರಿಸಿ ದೇವಾಲಯದ ಆವರಣದಿಂದ ಬಜಾರ್ ರಸ್ತೆ ಮೂಲಕ ನಗರದ ವಿವಿಧ ಕಡೆಗಳಲ್ಲಿ ಮಂಗಳವಾದ್ಯ ದೊಂದಿಗೆ ಮೆರವಣಿಗೆ ನಡೆಸಲಾಗುತ್ತದೆ.

ಶ್ರೀನಿವಾಸ್ ಭಟ್, ಆರ್ಚಕರು, ಶ್ರೀ ಲಕ್ಷ್ಮೀನಾರಾಯಣ ದೇವಾಲಯ.

ನಾಡಿನ ಸಂಸ್ಕೃತಿಯನ್ನು ಸಾರುವ ಹಾಗೂ ಪುರಾಣ ಪ್ರಸಿದ್ಧ ಐತಿಹಾಸಿಕ ಬೊಂಬೆಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಆ ಮೂಲಕ ಇಂದಿನ ಯುವ ಪೀಳಿಗೆಗೆ ನಾಡಹಬ್ಬ ಹಾಗೂ ನವರಾತ್ರಿ ಉತ್ಸವದ ಸಂಪ್ರದಾಯವನ್ನು ತಿಳಿಸಲಾ ಗುತ್ತಿದೆ. ಇಂದಿನ ಆಧುನಿಕತೆಯ ಭರಾಟೆ ನಡುವೆಯೂ ಪ್ರತಿ ವರ್ಷ ನವರಾತ್ರಿ ಹಬ್ಬದ ಪ್ರಯುಕ್ತ ದಸರಾ ಬೊಂಬೆ ಕೂರಿಸುವ ಪದ್ದತಿ ಇಂದಿಗೂ ಅನೇಕರ ಮನೆಗಳಲ್ಲಿ ನಡೆದುಕೊಂಡು ಬಂದಿದೆ.

ಜೆ.ಎಂ.ಕುಮಾರ್, ಗೌರವಾಧ್ಯಕ್ಷರು, ರಾಜ್ಯ ರೈತ ಪರ್ವ ಸಂಘ.

RELATED ARTICLES
- Advertisment -
Google search engine

Most Popular