ಚಾಮರಾಜನಗರ: ಡಿವಿಜಿಯವರ ಮಂಕುತಿಮ್ಮನ ಕಗ್ಗ ಕನ್ನಡ ಸಾಹಿತ್ಯ ಲೋಕವಲ್ಲದೆ ವಿಶ್ವದ ಮಾನವರೆಲ್ಲರಿಗೂ ಪ್ರತೀ ಕ್ಷಣ ಚಿಂತನೆಗೆ ಒಳಪಡಿಸಿರುವ ಜೀವನದ ಮೌಲ್ಯಗಳಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಮತ್ತು ಉಪನ್ಯಾಸಕರು ಆದ ಸುರೇಶ್ ಎನ್ ಋಗ್ವೇದಿ ತಿಳಿಸಿದರು.

ಅವರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಡಿವಿಜಿ ಹಾಗೂ ಪುತಿನ ಕೊಡುಗೆಗಳ ಕುರಿತು ಮಾತನಾಡುತ್ತಾ ಸಾಹಿತಿಗಳಾಗಿ, ಪತ್ರಕರ್ತರಾಗಿ ,ತತ್ವಜ್ಞಾನಿಯಾಗಿ, ವಿದ್ವಾಂಸರಾಗಿ, ಕವಿಯಾಗಿ ಪ್ರತಿ ಕ್ಷೇತ್ರದಲ್ಲೂ ಅತ್ಯುತ್ತಮ ಸೇವೆಯನ್ನು ಸಲ್ಲಿಸಿ ಕನ್ನಡಿಗರ ಶ್ರೇಷ್ಠ ವ್ಯಕ್ತಿಯಾಗಿದ್ದಾರೆ. ಇವರ ಕನ್ನಡದ ಭಗವದ್ಗೀತೆ ಎಂದೇ ಪರಿಗಣಿಸಲ್ಪಟ್ಟಿರುವ ಮಂಕುತಿಮ್ಮನ ಕಗ್ಗ ಜೀವನದ ವಿಶಿಷ್ಟ ಆಯಾಮಗಳನ್ನು ಪರಿಪೂರ್ಣತೆಯ ಸಾಹಿತ್ಯವನ್ನು ರಚಿಸಿ ಮಾದರಿಯಾಗಿದ್ದಾರೆ. ಮಂಕುತಿಮ್ಮನ ಕಗ್ಗ ಇಂದಿಗೂ ನೂರಾರು ವಿದ್ವಾಂಸರು ಸದಾ ಕಾಲ ಚರ್ಚಿಸುವ ಮೂಲಕ ಸಾಹಿತ್ಯ, ಸಂಗೀತ, ಗಮಕ, ಭಾಷಣಕ್ಕೆ ಅಪಾರವಾದ ಸಾಹಿತ್ಯವನ್ನೇ ನೀಡಿದೆ. ಡಿವಿಜಿಯವರ ಸಾಹಿತ್ಯದಲ್ಲಿ ಇತಿಹಾಸ ,ರಾಜನೀತಿ, ಪ್ರಜಾಪ್ರಭುತ್ವ, ಸಾರ್ವಜನಿಕ ಜೀವನ ,ಸಮಾಜದ ಚಿಂತನೆ ಪ್ರಜಾಪ್ರಭುತ್ವದ ಮೌಲ್ಯಗಳು ಹಾಗೂ ಮಾನವನ ಅಂತರಂಗ ಮತ್ತು ಬಹಿರಂಗ ಜೀವನ ಸೌಂದರ್ಯವನ್ನು ಬೆಳೆಸಿಕೊಳ್ಳುವ ಬಗ್ಗೆ ಮಹತ್ವದ ವಿಚಾರಧಾರೆಗಳನ್ನು ನೀಡಿದ್ದಾರೆ. ಡಿವಿಜಿಯವರ ಮಂಕುತಿಮ್ಮನ ಕಗ್ಗ ಪ್ರತಿಯೊಬ್ಬ ಕನ್ನಡಿಗನ ಮನೆಯಲ್ಲಿ ಇರಬೇಕು. ಭವಿಷ್ಯದ ವಿದ್ಯಾರ್ಥಿಗಳಿಗೆ ಮಂಕುತಿಮ್ಮನ ಕಗ್ಗ ನೀಡಿ ಅವರ ವ್ಯಕ್ತಿತ್ವವನ್ನು ರೂಪಿಸಲು ಕನ್ನಡಿಗರು ಆಲೋಚಿಸಬೇಕು ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ನಿರ್ದೇಶಕರು ನಿವೃತ್ತ ಮುಖ್ಯ ಶಿಕ್ಷಕರು ಆದ ಸರಸ್ವತಿ ಅವರು ಪುತಿ ನರಸಿಂಹಾಚಾರ್ ಬಗ್ಗೆ ಮಾತನಾಡಿ ಸಾಹಿತ್ಯ ನಿಂತ ನೀರಾಗದೆ ಮುಂದಿನ ಪೀಳಿಗೆಗೂ ತಲುಪಬೇಕು ಎಂಬ ದಿವ್ಯ ವಾಣಿಯನ್ನು ನುಡಿದ ಪುತಿನ ನವೋದಯ ಸಾಹಿತಿಗಳಾಗಿ ಪ್ರಕೃತಿ ಮತ್ತು ದೈವತ್ವದ ಹುಡುಕಾಟವನ್ನು ತಮ್ಮ ಸಾಹಿತ್ಯದಲ್ಲಿ ನೀಡಿದ್ದಾರೆ. ಇವರ ಜನ್ಮಸ್ಥಳ ಮೇಲುಕೋಟೆ ಇಂದಿಗೂ ಅವರ ಹುಟ್ಟಿದ ಮನೆ ಸ್ಮಾರಕವಾಗಿ ಇರುವುದು ನೋಡಬಹುದು ಎಂದು ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ನಿರ್ದೇಶಕರಾದ ರವಿಚಂದ್ರಪ್ರಸಾದ್ ಮತ್ತು ಶಿವಲಿಂಗ ಮೂರ್ತಿರವರು ಕನ್ನಡ ಗೀತೆ ಹಾಗೂ ಮಂಕುತಿಮ್ಮನ ಕಗ್ಗ ಗೀತೆಗಳನ್ನು ಹಾಡಿದರು.
ಕಾರ್ಯಕ್ರಮವನ್ನು ಮುಖಂಡರಾದ ಶ್ರೀಮತಿ.ಪದ್ಮ ಪುರುಷೋತ್ತಮ್ ಉದ್ಘಾಟಿಸಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಬಿಕೆ ಆರಾಧ್ಯ, ಸುರೇಶ್ ಗೌಡ, ನಿವೃತ್ತ ಶಿಕ್ಷಕರಾದ ಗೀತಾ, ಮಂಜುನಾಥ್ ,ಜಗದೀಶ್, ಅಜಯ್ ,ಚಂದ್ರು, ಮುಂತಾದವರು ಉಪಸ್ಥಿತರಿದ್ದರು.



