ಮೈಸೂರು: ಹಣ ಗಳಿಕೆಯೇ ಶಿಕ್ಷಣದ ಮುಖ್ಯ ಗುರಿಯಾಗಬಾರದು. ಮಕ್ಕಳಲ್ಲಿ ಮೌಲ್ಯ ತುಂಬುವ ಕಾರ್ಯ ಸಹ ಆಗಬೇಕು ಎಂದು ಕೆ.ಆರ್.ನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಪ್ರೊ.ಮೈಸೂರು ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು.
ಜಿಲ್ಲಾ ವಿತರಕರ ಸಂಘ ಸರಸ್ವತಿಪುರಂನ ರೋಟರಿ ಪಶ್ಚಿಮ ಶಾಲೆಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶಿಕ್ಷಣಕ್ಕೆ ಔದ್ಯೋಗಿಕ ಹಾಗೂ ಸಾಂಸ್ಕೃತಿಕ ಮುಖ ಇದೆ. ಆದರೆ, ಮಕ್ಕಳಿಗೆ ಔದ್ಯೋಗಿಕ ಮುಖವನ್ನು ಮಾತ್ರ ಪರಿಚಯ ಮಾಡಿದರೆ ಸಾಲದು, ಸಾಂಸ್ಕೃತಿಕ ಮುಖವನ್ನು ಸಹ ಪರಿಚಯಿಸಬೇಕು. ಇಲ್ಲವಾದಲ್ಲಿ ಜೀವನವನ್ನು ಮಕ್ಕಳು ಸರಿಯಾಗಿ ಅರ್ಥಮಾಡಿಕೊಳ್ಳುವಲ್ಲಿ ವಿಫಲರಾಗುತ್ತಾರೆ ಎಂದರು.
ಜೀವನದಲ್ಲಿ ನೋವು, ನಲಿವು ಎದುರಾಗುವುದು ಸಾಮಾನ್ಯ. ಅವುಗಳನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಕೇವಲ ಔದ್ಯೋಗಿಕ ಶಿಕ್ಷಣದ ಕಡೆಗೆ ಮಾತ್ರ ಗಮನ ಹರಿಸುವವರು ಸಂಕಷ್ಟದ ಸಂದರ್ಭಗಳಲ್ಲಿ ಆತ್ಮಹತ್ಯೆಯ ಹಾದಿ ತುಳಿಯುವ ಸಾಧ್ಯತೆ ಹೆಚ್ಚು ಇರುತ್ತದೆ. ಹಾಗಾಗಿ ಮಕ್ಕಳಿಗೆ ಮಾರ್ಗದರ್ಶನ ನೀಡುವ ಕಾರ್ಯವನ್ನು ಪಾಲಕರು ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ೭೦ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಸಂಘದ ಅಧ್ಯಕ್ಷ ಮನೋಜ್ ಕೋಟ್ಯಾನ್, ಉಪಾಧ್ಯಕ್ಷ ಎ.ಕೆ.ಶಿವಾಜಿರಾವ್, ಕಾರ್ಯದರ್ಶಿ ಈಶ ಕುಮಾರ್, ಖಜಾಂಚಿ ಎಂ.ಶ್ರೀಪತಿ ಇದ್ದರು.