ರಾಮನಗರ: ರಾಷ್ಟ್ರೀಯ ಫ್ಲೋರಿಸಿಸ್ ನಿಯಂತ್ರಣ ಹಾಗೂ ತಡೆಗಟ್ಟುವ ಕಾರ್ಯಕ್ರಮದಡಿಯಲ್ಲಿ ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿಗಳ ಕಛೇರಿ ವತಿಯಿಂದ ಫ್ಲೋರೋಸಿಸ್ ತಪಾಸಣಾ ಶಿಬಿರವನ್ನು ಆಯೋಜಿಸಿದ್ದು. ಫ್ಲೋರೈಡ್ ನಮ್ಮ ದೇಹಕ್ಕೆ ಬೇಕಾದ ಒಂದು ಖನಿಜಾಂಶ ನಾವು ಸೇವಿಸುವ ಆಹಾರ ಮತ್ತು ಕುಡಿಯುವ ನೀರಿನಲ್ಲಿ ಅವಶ್ಯಕತೆಗಿಂತ ಹೆಚ್ಚು ಫ್ಲೋರೈಡ್ ಅಂಶವಿದ್ದರೆ ಫ್ಲೋರೋಸಿಸ್ ಉಂಟಾಗುತ್ತದೆ. ಆದ್ದರಿಂದ ಫ್ಲೋರೋಸಿಸ್ ನಿಯಂತ್ರಿಸಲು ಫ್ಲೋರೈಡ್ ಮುಕ್ತ ಆಹಾರ ಮತ್ತು ನೀರು ಸೇವಿಸಬೇಕೆಂದು ವೈದ್ಯಾಧಿಕಾರಿ ಡಾ. ರೇಣುಕಾಪ್ರಸಾದ್ ಅವರು ತಿಳಿಸಿದರು.
ಅವರು ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿಗಳ ಕಚೇರಿ, ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ ರಾಮನಗರ ಇವರ ಸಂಯುಕ್ತ ಆಶ್ರಯದಲ್ಲಿ ನಂಜಾಪುರ ಪ್ರಾಥಮಿಕ ಆರೋಗ್ಯ ಕೇಂದದ್ರದ ಆಸ್ಪತ್ರೆಯಲ್ಲಿ ರಾಷ್ಟ್ರೀಯ ಫ್ಲೋರೋಸಿಸ್ ನಿಯಂತ್ರಣ ಹಾಗೂ ತಡೆಗಟ್ಟುವ ಕಾರ್ಯಕ್ರಮದಡಿಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ದಂತವೈದ್ಯರಾದ ಡಾ. ಪ್ರಕೃತಿ ಅವರು ಮಾತನಾಡಿ ಮಕ್ಕಳು ದಂತ ಫ್ಲೋರೋಸಿಸ್ಗೆ ಸುಲುಬವಾಗಿ ತುತ್ತಾಗುತ್ತಾರೆ. ಮಕ್ಕಳ ಹಲ್ಲುಗಳ ಬೆಳವಣಿಗೆಯ ಸಮಯದಲ್ಲಿ ಹೆಚ್ಚು ಫ್ಲೋರೈಡ್ ಅಂಶವಿರುವ ನೀರು ಆಹಾರ ಪದಾರ್ಥಗಳು ಮತ್ತು ಟೂತ್ ಪೇಸ್ಟ್ ಗಳನ್ನು ಬಳಸುವುದರಿಂದ ದಂತ ಫ್ಲೋರೋಸಿಸ್ ಬರುತ್ತದೆ. ಅದರಲ್ಲೂ 8 ವರ್ಷದೊಳಗಿನ ಮಕ್ಕಳಲ್ಲಿ ಫ್ಲೋರೋಸಿಸ್ ಸಾದರಣವಾಗಿ 5-7 ವರ್ಷದ ಮಕ್ಕಳಲ್ಲಿ ವಿಪರೀತವಾಗಿ ಕಂಡು ಬರುತ್ತದೆ. ಆದ್ದರಿಂದ ಹಲ್ಲಿನ ಮೇಲೆ ಹಳದಿ ಅಥವಾ ಕಂದು ಬಣ್ಣ, ಅಡ್ಡ ಗೆರೆಗಳು ಉಂಟಾಗುತ್ತವೆ. ಇದರಿಂದ ಹಲ್ಲಿನ ಒಳ ಹಾಗೂ ಹೊರ ಭಾಗಗಳಲ್ಲಿ ತೊಂದರೆಯಾಗುತ್ತದೆ. ಹಲ್ಲುಗಳ ಸ್ವಚ್ಛತೆ ಕಾಪಾಡಿಕೊಳ್ಳುವ ಜೊತೆಗೆ ಪ್ರತಿ 6 ತಿಂಗಳಿಗೊಮ್ಮೆ ದಂತ ವೈದ್ಯರಲ್ಲಿ ಪರೀಕ್ಷಿಸಿಕೊಳ್ಳ ಬೇಕೆಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಎಸ್.ಗಂಗಾಧರ್ ಅವರು ಮಾತನಾಡಿ ಸಾಮಾನ್ಯವಾಗಿ ಕುಡಿಯುವ ನೀರು, ಆಹಾರ, ಕೆಲವು ಔಷಧಿಗಳ ಸೇವನೆ, ಕಾರ್ಖಾನೆಗಳಿಂದ ಹೊರ ಹೊಮ್ಮುವ ಧೂಳು, ಹೊಗೆ, ಮುಂತಾದವುಗಳಿಂದ ಫ್ಲೋರೈಡ್ ದೇಹದೊಳಗೆ ಸೇರುತ್ತದೆ. ಫ್ಲೋರೋಸಿಸ್ ವಯಸ್ಸಿನ ಅಂತರ, ಲಿಂಗಬೇದವಿಲ್ಲದೆ ಚಿಕ್ಕ ಮಕ್ಕಳು, ವಯಸ್ಕರು, ಮಹಿಳೆಯರು, ಪುರುಷರು, ಎಲ್ಲರಲ್ಲಿಯೂ ದಂತ, ಮೂಳೆ ಹಾಗೂ ದೇಹದ ಇತರೆ ಭಾಗಗಳಲ್ಲಿ ಕಂಡು ಬರುತ್ತದೆ. ಆದ್ದರಿಂದ ತಾವುಗಳು ಜಾಗೃತರಾಗಿ ಫ್ಲೋರೈಡ್ ಯುಕ್ತ ನೀರು, ಆಹಾರ ಸೇವನೆ ಮಾಡುವಂತೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಸಂಯೋಜಕರಾದ ಬಾಬು, ಕಾರ್ತಿಕ್, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವಿನಯ್ ಕುಮಾರ್, ಪ್ರಯೋಗ ಶಾಲಾ ತಾಂತ್ರಿಕ ಅಧಿಕಾರಿ ಪುಟ್ಟಸ್ವಾಮಿಗೌಡ, ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿಗಳಾದ ಸಮಂತ, ಆಶಾ ಕಾರ್ಯಕರ್ತೆಯರು, ಗರ್ಭಿಣಿಯರು ಹಾಗೂ ಸಾರ್ವಜನಿಕರು ಹಾಜರಿದ್ದರು.