ಮೈಸೂರು : ಮಾರಣಾಂತಿಕ ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದವರಿಗೆ ವೆಂಟಿಲೇಟರ್ ಬಳಕೆಯೇ ಅಂತಿಮ ಎಂಬ ನಂಬಿಕೆ ಈಗ ಅಗತ್ಯವಿಲ್ಲ. ಅದನ್ನೂ ಮೀರಿದ ಎಕ್ಮೊ ಎಂಬ ಸಾಧನ ಬಳಕೆಗೆ ಬಂದಿದ್ದು, ತಮ್ಮ ಆಸ್ಪತ್ರೆಯಲ್ಲಿ ಈ ಸಾಧನ ಬಳಸಿ ೪೧ ವರ್ಷ ವಯಸ್ಸಿನ ಮಹಿಳಾ ರೋಗಿಯೊಬ್ಬರ ಜೀವ ಉಳಿಸಲಾಗಿದೆ ಎಂದು ಮಣಿಪಾಲ್ ಆಸ್ಪತ್ರೆಯ ಹಿರಿಯ ತಜ್ಞ ವೈದ್ಯರಾದ ಡಾ. ಉಪೇಂದ್ರ ಶೆಣೈ ತಿಳಿಸಿದರು.
ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗಾರರೊಡನೆ ಮಾತನಾಡಿ, ರೋಗಿಯೊಬ್ಬರು ಎಚ್೧ಎನ್೧ ಕಾರಣದಿಂದಾಗಿ ತೀವ್ರ ಜ್ವರ, ಕೆಮ್ಮು ಹಾಗೂ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಇವರು ಮತ್ತೊಂದು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾದ ವೇಳೆ ವೆಂಟಿಲೇಟರ್ ಬಳಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಶ್ವಾಸಕೋಶ ಚೇತರಿಸಿಕೊಳ್ಳದ ಕಾರಣ ಹಾಗು ರಕ್ತಕ್ಕೆ ಆಮ್ಲಜನಕ ಪೂರೈಸಲು ಅಸಾಧ್ಯವಾದ ಸ್ಥಿತಿ ತಲುಪಿದ್ದ ಕಾರಣ ತಮ್ಮ ಮಣಿಪಾಲ್ ಆಸ್ಪತ್ರೆಗೆ ದಾಖಲಾಗುವಂತೆ ಶಿಫಾರಸು ಮಾಡಿದರು. ಇವರಿಗೆ ಇಲ್ಲಿ ಎಕ್ಮೋ ಎಂಬ ಸಾಧನದ ಮೂಲಕ ಚಿಕಿತ್ಸೆ ನೀಡಿದ್ದು, ಈಗ ಚೇತರಿಸಿಕೊಂಡಿದ್ದಾರೆ ಎಂದು ತಿಳಿಸಿದರು.
ನಂತರ, ಶ್ವಾಸಕೋಶ ತಜ್ಞ ಡಾ. ಮಹದೇವ್ ಮಾತನಾಡಿ, ಸಾಮಾನ್ಯವಾಗಿ ತಮ್ಮ ಆಸ್ಪತ್ರೆಯಲ್ಲಿಯೂ ಸಹಾ ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿರುವವರಿಗೆ ವೆಂಟಿಲೇಟರ್ ಮೂಲಕ ಚಿಕಿತ್ಸೆ ನೀಡಲಾಗುತ್ತದೆ. ಆದರೆ ಶ್ವಾಸಕೋಶ ವೆಂಟಿಲೇಟರ್‌ನಿಂದ ಬರುವ ಆಮ್ಲಜನಕವನ್ನು ರಕ್ತಕ್ಕೆ ಸೇರ್ಪಡೆ ಮಾಡದಷ್ಟು ಅನಾರೋಗ್ಯಕ್ಕೀಡಾ ಗಿರುವ ವೇಳೆ ಎಕ್ಮೋ ಸಾಧನ ಬಳಸಿ ರೋಗಿಯ ರಕ್ತಕ್ಕೆ ಆಮ್ಲಜನಕ ಮಿಶ್ರಣ ಮಾಡಿ ಪ್ರಾಣ ಉಳಿಸಲಾಗುತ್ತದೆ. ಕ್ರಮೇಣ ರೋಗಿಯ ಶ್ವಾಸಕೋಶದ ಆರೋಗ್ಯ ಸುಧಾರಿಸಲಿದ್ದು, ಬಳಿಕ ಎಕ್ಮೋ ಸಾಧನ ಬಳಕೆ ನಿಲ್ಲಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.