ಚಾಮರಾಜನಗರ: ರಾಷ್ಟ್ರೀಯ ಅಂಚೆ ಸಪ್ತಾಹದ ಅಂಗವಾಗಿ ತಾಲೂಕಿನ ಮರಿಯಾಲ ಗ್ರಾಮದಲ್ಲಿ ಆರ್ಥಿಕ ಸಬಲೀಕರಣ ದಿನವನ್ನು ಆಚರಿಸಲಾಯಿತು. ಅಂಚೆ ಇಲಾಖೆ ಸೇವೆಗಳ ಕುರಿತು ಗ್ರಾಮದಲ್ಲಿ ಜಾಥಾ ನಡೆಸಿ ಜಾಗೃತಿ ಮೂಡಿಸಲಾಯಿತು. ಮರಿಯಾಲ ಗ್ರಾಮದಲ್ಲಿ ಸಂಪೂರ್ಣವಾಗಿ ಮನೆ-ಮನೆಯಲ್ಲೂ ಉಳಿತಾಯ ಖಾತೆಗಳನ್ನು ತೆರೆದಿರುವುದರಿಂದ ಮರಿಯಾಲವನ್ನು ಸಂಪೂರ್ಣ ಬಚ್ಚತ್ ಗ್ರಾಮ ಎಂದು ಘೋಷಣೆ ಮಾಡಲಾಯಿತು.
ಅಂಚೆ ಅಧೀಕ್ಷಕ ಎಚ್.ಸಿ. ಸದಾನಂದ ಅವರು ಮಾತನಾಡಿ ಸಾರ್ವಜನಿಕರಿಗೆ ಅಂಚೆ ಇಲಾಖಾ ಸೌಲಭ್ಯಗಳಾದ ಆಧಾರ್ ನೊಂದಣಿ ಮತ್ತು ತಿದ್ದುಪಡಿಯ ಸೇವೆ, ಸಾಮಾಜಿಕ ಭದ್ರತಾ ಪಿಂಚಣಿ ಫಲಾನುಭವಿಯ ಖಾತೆಗಳಿಗೆ ಆಧಾರ್ ಸೀಡಿಂಗ್ ಮಾಡುವ ಮೂಲಕ ಪಿಂಚಣಿದಾರರ ಮನೆ ಬಾಗಿಲಿಗೆ ಹಣ ಪಾವತಿ ಸೇವೆ ಮಾಡಲಾಗುತ್ತಿದೆ. ವೃದ್ದರು, ಅಶಕ್ತರ ಮನೆ ಮನೆಗೆ ತೆರಳಿ ಅತೀ ಸುಲಭವಾಗಿ ಹಣ ಪಾವತಿಯ ಸೇವೆಗಳನ್ನು ನೀಡಲಾಗುತ್ತಿದೆ. ನಾಗರಿಕರು ಇದರ ಸದುಪಯೋಗ ಮಾಡಿಕೊಳ್ಳಬೇಕೆಂದು ಮನವಿ ಮಾಡಿದರು.
ಅಂಚೆ ವಿಮೆ ಮತ್ತು ಉಳಿತಾಯ ಖಾತೆಗಳಾದ ಸೇವಿಂಗ್ಸ್ ಬ್ಯಾಂಕ್, ರೆಕರಿಂಗ್ ಡಿಪಾಜಿಟ್, ಟಿ.ಡಿ.ಎಂ.ಐ.ಎಸ್. ಹಿರಿಯ ನಾಗರಿಕರಿಗೆ ಅತಿ ಹೆಚ್ಚಿನ ಬಡ್ದಿ ದೊರೆಯುವ ಸೀನಿಯರ್ ಸಿಟಿಜನ್ ಮೊದಲಾದ ಖಾತೆಗಳ ಅನುಕೂಲಗಳನ್ನು ಸಾರ್ವಜನಿಕರು ಪಡೆಯಬೇಕು ಎಂದು ಸದಾನಂದ ಅವರು ನುಡಿದರು. ಸಹಾಯಕ ಅಂಚೆ ಅಧೀಕ್ಷಕರಾದ ರಾಧಕೃಷ್ಣ ಮಲ್ಯ ಅವರು ಮಾತನಾಡಿ ಅಂಚೆ ಇಲಾಖೆಯಲ್ಲಿ ಲಭ್ಯವಿರುವ ವಿದ್ಯುತ್ ಬಿಲ್ ಪಾವತಿ, ಸಿ.ಎಸ್.ಸಿ ಸೌಲಭ್ಯ, ರೈಲ್ವೆ ಟಿಕೆಟ್ ಬುಕ್ಕಿಂಗ್ ಸೇವೆಗಳ ಬಗ್ಗೆ ತಿಳಿಸಿದರು.