ವಿಟ್ಲ: ಇಲ್ಲಿಗೆ ಸಮೀಪದ ಕೊಳ್ನಾಡು ಗ್ರಾಮದ ಬೋಳಂತೂರು, ನಾರ್ಶದ ಬೀಡಿ ಉದ್ಯಮಿಯ ಮನೆಯಲ್ಲಿ ಈಚೆಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಸೋಗಿನಲ್ಲಿ ದಾಳಿ ನಡೆಸಿ ದರೋಡೆ ಮಾಡಿದ ಪ್ರಕರಣದ ಒಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿ, ಕರೆತಂದಿದ್ದಾರೆ. ಕೃತ್ಯಕ್ಕೆ ಬಳಸಿದ್ದ ಮಾರುತಿ ಎರ್ಟಿಗಾ ಕಾರು ಹಾಗೂ ₹ 5 ಲಕ್ಷ ನಗದನ್ನು ಆರೋಪಿಯಿಂದ ವಶಪಡಿಸಿಕೊಂಡಿದ್ದಾರೆ.
ಕೇರಳದ ಕೊಲ್ಲಂ ಜಿಲ್ಲೆಯ ಪೆರಿನಾಡ್, ತ್ರಿಕ್ಕಡವೂರಿನ ಅನಿಲ್ ಫರ್ನಾಂಡಿಸ್ (49 ವರ್ಷ) ಬಂಧಿತ ಆರೋಪಿ. ಆತನಿಂದ ಕೇರಳ ನೋಂದಣಿಯ ಎರ್ಟಿಗಾ ಕಾರು ಹಾಗೂ ಕೃತ್ಯ ನಡೆಸುವಾಗ ಆ ಕಾರಿಗೆ ಅಳವಡಿಸಿದ್ದ ನಕಲಿ ನಂಬರ್ ಪ್ಲೇಟ್ ಹಾಗೂ ₹ 5 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸ್ವತ್ತುಗಳ ಒಟ್ಟು ಮೌಲ್ಯ ₹ 11 ಲಕ್ಷ ಆಗಬಹುದು ಎಂದು ಅಂದಾಜಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
‘ಆರೋಪಿಯನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ. ಆತ ಅಂತರರಾಜ್ಯ ದರೋಡೆಕೋರ ಎಂಬುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಆತ ನೀಡಿರುವ ಸುಳಿವಿನ ಆಧಾರದಲ್ಲಿ, ಈ ಪ್ರಕರಣದಲ್ಲಿ ಭಾಗಿಯಾದ ಇತರ ಆರೋಪಿಗಳ ಪತ್ತೆಗೆ ಕ್ರಮ ವಹಿಸಲಾಗಿದೆ’ ಎಂದು ಅವರು ತಿಳಿಸಿದ್ದಾರೆ.
ಕನ್ನಡದಲ್ಲಿ ಮಾತನಾಡಿದ್ದ ಆರೋಪಿ: ‘ಅನಿಲ್ ಕೇರಳದವನಾದರೂ ಬೆಂಗಳೂರಿನಲ್ಲಿ ಹೆಚ್ಚು ಒಡನಾಟ ಹೊಂದಿದ್ದ. ಹಾಗಾಗಿ ಕನ್ನಡ ಮಾತನಾಡಲು ತಿಳಿದಿದ್ದ. ದರೋಡೆ ನಡೆಸಿದ ತಂಡದಲ್ಲಿದ್ದ ಇತರರು ಮನೆಯವರ ಬಳಿ ಹಿಂದಿಯಲ್ಲಿ ಮಾತನಾಡಿದ್ದರು. ಆದರೆ ಅನಿಲ್ ಮಾತ್ರ ಕನ್ನಡದಲ್ಲಿ ಮಾತನಾಡಿದ್ದ. ಮನೆಯವರಿಗೆ ‘ನಾವು ಇ.ಡಿ ಅಧಿಕಾರಿಗಳು’ ಎಂದು ತಿಳಿಸಿದ್ದು, ಅನಿಲ್’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬೀಡಿ ಉದ್ಯಮಿಯ ಮನೆಗೆ 2025ರ ಜ. 30ರಂದು ರಾತ್ರಿ ನುಗ್ಗಿದ್ದ ಆರು ಜನರು ತಮ್ಮನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಎಂದು ಪರಿಚಯಿಸಿಕೊಂಡಿದ್ದರು. ಉದ್ಯಮಿ ವಿರುದ್ಧ ಹಣಕಾಸು ವಂಚನೆ ಆರೋಪವಿದೆ ಎಂದು ನಂಬಿಸಿ, ಅವರ ಮನೆಯ ಶೋಧ ನಡೆಸಿದ್ದರು. ಈ ವೇಳೆ ಸಿಕ್ಕಿದ್ದ ಸುಮಾರು ₹ 30 ಲಕ್ಷ ನಗದನ್ನು ದರೋಡೆ ಮಾಡಿ ಪರಾರಿಯಾಗಿದ್ದರು. ಅವರನಡವಳಿಕೆ ಬಗ್ಗೆ ಸಂದೇಹ ಬಂದಿದ್ದರಿಂದ ಉದ್ಯಮಿಯ ಮನೆಯವರು ಪೊಲೀಸರಿಗೆ ದೂರು ನೀಡಿದ್ದರು. ಈ ಸಂಬಂಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್. ಅವರು ಈ ಪ್ರಕರಣದ ಆರೋಪಿಗಳ ಪತ್ತೆಗಾಗಿ ನಾಲ್ಕು ವಿಶೇಷ ತಂಡಗಳನ್ನು ರಚಿಸಿದ್ದರು. ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ಈ ಹಿಂದೆ ನಡೆದಿದ್ದ ಅಪರಾಧ ಪ್ರಕರಣ ಭೇದಿಸಲು ನೆರವಾಗಿದ್ದ ನುರಿತ ಅಧಿಕಾರಿಗಳು ಹಾಗೂ ಸಿಬ್ಬಂದಿ ಆ ತಂಡಗಳಲ್ಲಿದ್ದರು.