ಬೆಂಗಳೂರು: ರಂಜಾನ್ ಆಚರಣೆಗಾಗಿ ಮುಸ್ಲಿಂ ಶಾಲಾ ಮಕ್ಕಳ ವೇಳಾಪಟ್ಟಿ ಸಡಿಲಿಕೆ ಮಾಡಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಎಲ್ಲ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಉರ್ದು ಮಾಧ್ಯಮದ ಕಿರಿಯ, ಹಿರಿಯ ಹಾಗೂ ಪ್ರೌಢಶಾಲೆಗಳ ರಂಜಾನ್ ತಿಂಗಳ ಶಾಲಾ ಅವಧಿಯಲ್ಲಿ ಬದಲಾವಣೆ ಮಾಡಿ ಶಾಲಾ ಶಿಕ್ಷಣ ಇಲಾಖೆಯ ಉರ್ದು ಮತ್ತು ಇತರ ಅಲ್ಪಸಂಖ್ಯಾತ ಭಾಷಾ ಶಾಲೆಗಳ ನಿರ್ದೇಶನಾಲಯ ಸುತ್ತೋಲೆ ಹೊರಡಿಸಿದೆ.
ರಂಜಾನ್ ತಿಂಗಳ ಪ್ರಾರಂಭದ ದಿನದಿಂದ ಏಪ್ರಿಲ್ 10ರವರೆಗೆ ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 12.45ರವರೆಗೆ ಮಾತ್ರ ತರಗತಿ ಇರಲಿದೆ. ಈ ಅವಧಿಯಲ್ಲಿ ಶಾಲಾ ಸಮಯ ಮೊಟಕುಗೊಳಿಸುವುದರಿಂದ ಕಡಿಮೆ ಆಗುವ ಅವಧಿಯನ್ನು ಇತರ ರಜಾ ದಿನಗಳಲ್ಲಿ ಕಾರ್ಯನಿರ್ವಹಿಸಿ ಸರಿದೂಗಿಸುವಂತೆ ನಿರ್ದೇಶನಾಲಯ ಸೂಚಿಸಿದೆ. ಇದರ ಜತೆಗೆ ರಾಜ್ಯದ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮುಸ್ಲಿಂ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ರಂಜಾನ್ ತಿಂಗಳಿನಲ್ಲಿ ಸಂಜೆ ಅರ್ಧ ಗಂಟೆ ಮುಂಚಿತವಾಗಿ ತೆರಳಲು ಅನುಮತಿ ನೀಡುವಂತೆ ಹೇಳಲಾಗಿದೆ.
ಸರ್ಕಾರದ ಸಲಹಾತ್ಮಕ ವೇಳಾಪಟ್ಟಿಯಂತೆ ಬೆಳಗ್ಗೆ ಹತ್ತರಿಂದ ಸಂಜೆ 4.20ರವರೆಗೆ ಶಾಲಾ ಅವಧಿ ನಿಗದಿಯಾಗಿದ್ದು ರಂಜಾನ್ ಹಿನ್ನೆಲೆಯಲ್ಲಿ ಉರ್ದು ಶಾಲೆಗಳಿಗೆ ವಿನಾಯಿತಿ ನೀಡಲಾಗಿದೆ.