ಮೈಸೂರು: ಶಿಕ್ಷಣಕ್ಕೆ ಮಹತ್ವವಾದ ಶಕ್ತಿ ಇದ್ದು, ನೀವು ನಿಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ನೀಡಿ ಸಾಧನೆಗಳ ಮೂಲಕ ಇನ್ನೊಬ್ಬರ ಹೃದಯವನ್ನು ಗೆಲ್ಲುವಂತೆ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ ಕರೆ ನೀಡಿದರು.
ಮಾನಸ ಗಂಗೋತ್ರಿಯ ಶಿಕ್ಷಣ ಸಂಸ್ಥೆ ಸಭಾಂಗಣದಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಮಾನಸಗಂಗೋತ್ರಿ ಶಾಲೆಯ ಹಿರಿಯ ವಿದ್ಯಾರ್ಥಿಗಳ ಸಂಘವನ್ನು ಉದ್ಘಾಟಿಸಿ ಮಾತನಾಡಿದ ಅವರು ನಾನು ಬಡತನದಲ್ಲಿ ಬೆಳೆದು ಕಷ್ಟಪಟ್ಟು ಓದಿ ನಿಮ್ಮ ಮುಂದೆ ಎಂ.ಎಲ್.ಸಿ ಆಗಿ ನಿಲ್ಲಲ್ಲು ಶಿಕ್ಷಣವೇ ಕಾರಣ ಪ್ರತಿಯೊಬ್ಬ ಮನುಷ್ಯನಿಗೂ ನಾಗರೀಕತೆ ಇರಬೇಕು. ಸಮಾಜವನ್ನು ಹೇಗೆ ಬದಲಾವಣೆ ಮಾಡಬೇಕು ಎಂಬ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾದರೆ ಅಧಿಕಾರ ಇರಬೇಕು. ಅಧಿಕಾರ ಬರಬೇಕಾದರೆ ಶಿಕ್ಷಣ ಇರಬೇಕು. ತಾಯಿ ತನ್ನ ಮಕ್ಕಳನ್ನು ಬೆಳೆಸಿ ವಿದ್ಯಾವಂತರನ್ನಾಗಿ ಮಾಡಲು ಜೀವನವನ್ನೇ ತ್ಯಾಗ ಮಾಡುತ್ತಾಳೆ. ಆ ತಾಯಿಯ ಋಣವನ್ನು ತೀರಿಸಲು ಸಾಧ್ಯವಿಲ್ಲ. ಆದ್ದರಿಂದ ಮನುಷ್ಯನ ಜೀವನದ ಉದ್ದೇಶಗಳು ಚೆನ್ನಾಗಿರಬೇಕಾದರೆ ಹಾಗೂ ಸಮಾಜಕ್ಕೆ ಉಪಯೋಗವಾಗುರುವಂತಿರಬೇಕಾದರೆ ಶಿಕ್ಷಣ ಸಂಸ್ಥೆಗಳು ಬೆಳೆಯಬೇಕು.

ಮೈಸೂರು ವಿ.ವಿ.ಯಿಂದ ಪ್ರತಿವರ್ಷ ಬರುತ್ತಿರುವ ೨೦ ಲಕ್ಷ ಅನುದಾನವನ್ನು ಇನ್ನೂ ಒಂದು ವರ್ಷ ಮುಂದುವರೆಸಲು ಕುಲಪತಿಗಳೊಂದಿಗೆ ಮಾತನಾಡುತ್ತೇನೆ. ಮುಂದಿನ ವರ್ಷದಿಂದ ನನ್ನ ಅನುದಾನದಲ್ಲಿ ಸಂಸ್ಥೆಗೆ ಸಹಾಯ ಮಾಡುತ್ತೇನೆ. ಸಿ.ಎಸ್.ಆರ್. ಫಂಡ್ ಕೇಳಲು ಹೋದಾಗ ನನ್ನನ್ನು ಕರೆಯಿರಿ. ಹಣ ಮತ್ತು ರಕ್ತ ಒಂದೇಕಡೆ ನಿಲ್ಲಬಾರದು ಅದು ನದಿಯಂತೆ ಹರಿಯುತ್ತಿರಬೇಕು. ಈ ಸಂಸ್ಥೆಯಲ್ಲಿ ಪ್ರಸಿದ್ದ ವಿದ್ಯಾಂಸರ ಮತ್ತು ಪತ್ರಕರ್ತರ ಮಕ್ಕಳು ಓದಿದವರಿದ್ದಾರೆ, ಹಳೆಯ ವಿದ್ಯಾರ್ಥಿಗಳು ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ದೇಶ ವಿದೇಶಗಳಲ್ಲಿಯೂ ಕೆಲಸ ಮಾಡುತ್ತಿದ್ದಾರೆ. ಬಾಲ್ಯದ ನೆನೆಪುಗಳನ್ನು ಮೆಲುಕು ಹಾಕುವ ಸ್ನೇಹ, ಸಂಬಂಧಗಳನ್ನು ಬೆಸೆಯುವ ಈ ಹಳೇ ವಿದ್ಯಾರ್ಥಿ ಸಂಘವನ್ನು ಎಲ್ಲರೂ ಸೇರಿಕೊಂಡು ಕಟ್ಟಿ ಬೆಳಸಬೇಕು ಎಂದು ತಿಳಿಸಿದರು.
ಸಮಾರಂಭದಲ್ಲಿ ಸಂಸ್ಥೆಯ ಗೌರವ ಅಧ್ಯಕ್ಷರಾದ ಪ್ರೋ. ಬಿ.ಕೆ. ಜಗದೀಶ್, ಮುಖ್ಯ ಶಿಕ್ಷಕರಾದ ಸಿ.ಎ. ಚಿಂದೇಗೌಡ, ಪಿ.ಆರ್.ಪದ್ಮ, ಅಧ್ಯಕ್ಷ ಕೆ.ಪಿ.ದಿವಾಕರ್, ಉಪಾಧ್ಯಕ್ಷ ಹರೀಶ್‌ಮೊಗಣ್ಣ, ಕಾರ್ಯದರ್ಶಿ ಎಂ.ರಮೇಶ್, ಬಸವಯ್ಯ, ಸಾಗರ್ ಹಾಗೂ ಹಿರಿಯ ವಿದ್ಯಾರ್ಥಿಗಳು ಹಾಜರಿದ್ದರು.