ಮೈಸೂರು: ನಮ್ಮಲ್ಲಿ ಬಹಳ ಹಿಂದಿನ ಕಾಲದಿಂದಲೂ ದುಡ್ಡೇ ದೊಡ್ಡಪ್ಪ ವಿದ್ಯೆ ಅದರಪ್ಪ ಎಂಬ ಒಂದು ಅಮೂಲ್ಯವಾದ ಮಾತು ಜನಮನದಲ್ಲಿ ಚಾಲ್ತಿಯಲ್ಲಿದ್ದು ಶಿಕ್ಷಣದ ಮಹತ್ವ ಸಾರುತ್ತಿದ್ದು ಇದನ್ನು ಅಬಾಲವೃದ್ಧರಾದಿಯಾಗಿ ಪ್ರತಿಯೊಬ್ಬರೂ ಅರಿಯಬೇಕೆಂದು ಸಾಹಿತಿ ಬನ್ನೂರು ಕೆ.ರಾಜು ಹೇಳಿದರು.
ನಗರದ ಸೂಯೇಜ್ ಫಾರಂ ರಸ್ತೆಯಲ್ಲಿ ನೂತನವಾಗಿ ಪ್ರಾರಂಭವಾಗಿರುವ ಫೋಕಸ್ ಇನ್ಸ್ಟಿಟ್ಯೂಟ್ ಸಂಸ್ಥೆ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯೆ ಅಕ್ಷಯಪಾತ್ರೆಯಂತಿದ್ದು, ಇದನ್ನು ಆಸಕ್ತಿಯಿಂದ ಒಮ್ಮೆ ಕಲಿತು ಶಿಕ್ಷಣದ ಅರಿವಿನ ಜ್ಞಾನವನ್ನು ತಲೆಯಲ್ಲಿ ತುಂಬಿಕೊಂಡರೆ ಸಾಕು ನಮ್ಮ ಜೀವಮಾನಪೂರ್ತಿ ಅದು ಎಂದೂ ಖಾಲಿಯಾಗದೆ ಅಕ್ಷಯಪಾತ್ರೆಯಂತೆ ವೃದ್ಧಿಯಾಗುತ್ತಿರುತ್ತದೆಂದರು.
ಹಣ, ಐಶ್ವರ್ಯ ಸೇರಿದಂತೆ ನಾವು ಗಳಿಸಿದ ಎಲ್ಲಾ ರೀತಿಯ ಸಿರಿ ಸಂಪತ್ತುಗಳೂ ಇಂದು ಇದ್ದು ನಾಳೆ ಹೊರಟು ಹೋಗಬಹುದು. ಆದರೆ ನಾವು ಗಳಿಸಿದ ವಿದ್ಯೆ ಅಥವಾ ಶಿಕ್ಷಣ ಎಂಬ ಸಂಪತ್ತು ಯಾವತ್ತೂ ನಮ್ಮನ್ನು ಬಿಟ್ಟು ಹೋಗದು. ಬದಲಿಗೆ ಆಸಕ್ತಿಯಿಂದ ಕಲಿಯುತ್ತಾ ಓದಲ್ಲಿ ಮತ್ತಷ್ಟು, ಮಗದಷ್ಟು ಅದು ನಮ್ಮಲ್ಲಿ ಉತ್ಪತ್ತಿಯಾಗುತ್ತಲೇ ಇರುತ್ತದೆ. ನಮ್ಮಲ್ಲಿರುವ ವಿದ್ಯೆ ಎಂಬ ಆಸ್ತಿಯನ್ನು ಎಷ್ಟು ಮಂದಿಗೆ ಬೇಕಾದರೂ ಹಂಚಬಹುದು. ವಿದ್ಯಾ ದಾನದ ಮೂಲಕ ನಾವು ಇತರರಿಗೆ ಶಿಕ್ಷಣ ಕೊಟ್ಟಷ್ಟು ಇದು ನಮ್ಮಲ್ಲಿ ಹೆಚ್ಚೆಚ್ಚು ಬೆಳೆಯುತ್ತದೆ. ವಿದ್ಯೆಯೆಂಬುದು ಶಾಶ್ವತವಾದ ಸಂಪತ್ತು. ಶಿಕ್ಷಣವೆಂಬುದು ಎಂದೂ ಕರಗದ ಬಹುದೊಡ್ಡ ಆಸ್ತಿ. ವಿದ್ಯೆ ಎಂದರೆ, ಶಿಕ್ಷಣವೆಂದರೆ ಕೇವಲ ಶಾಲಾ ಕಾಲೇಜುಗಳ ಪಠ್ಯ ಪರಿವಿಡಿಯ ಕಲಿಕೆಯಷ್ಟೇ ಅಲ್ಲ. ಇದು ಸ್ಪರ್ಧಾ ಜಗತ್ತು ವೇಗದ ಪ್ರಪಂಚ. ಆದ್ದರಿಂದ ಇದರೊಡನೆ ಸಮರ್ಥವಾಗಿ ನಾವು ಸ್ಪರ್ಧಿಸಬೇಕೆಂದರೆ, ಸ್ಪರ್ಧಿಸಿ ಸಮರ್ಥ ಸಾಧಕರಾಗ ಬೇಕೆಂದರೆ ಎಲ್ಲಾ ರೀತಿಯಲ್ಲೂ ನಾವು ಜ್ಞಾನದ ಪರಿಧಿಯನ್ನು ಅಷ್ಟೇ ವೇಗವಾಗಿ ವಿಸ್ತರಿಸಿ ಕೊಳ್ಳಬೇಕು. ಹಾಗಾಗಿ ಕೌಶಲ್ಯಾಭಿವೃದ್ಧಿ, ವ್ಯಕ್ತಿತ್ವ ವಿಕಸನ, ಸ್ವತಂತ್ರ ಚಿಂತನೆ, ಸ್ವಸಾಮರ್ಥ್ಯದ ವಿಕಾಸ, ಸಾಮಾನ್ಯ ಜ್ಞಾನ ಒಳಗೊಂಡಂತೆ ಸಂಪೂರ್ಣ ಜ್ಞಾನ ಪ್ರಪಂಚವನ್ನು ತಮ್ಮದಾಗಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಇಂತಹ ಜ್ಞಾನಾಶಯದೊಡನೆ ಶ್ರೀಪ್ರಭುದೇವರು ಆರಂಭಿಸಿರುವ ಫೋಕಸ್ ಇನ್ಸ್ಟಿಟ್ಯೂಟ್ ಸಂಸ್ಥೆಯನ್ನು ಅಗತ್ಯವಿರುವವರೆಲ್ಲರೂ ಸದ್ಬಳಕೆ ಮಾಡಿಕೊಳ್ಳಬೇಕೆಂದು ತಿಳಿಸಿದರು.
ನಟ ಸುಪ್ರೀತ್ ಮಾತನಾಡಿ, ಕಲಿಕಾಸಕ್ತರು ಯಾರೇ ಆದರೂ ಸರಿಯೇ ಅವರು ಮೊದಲು ಗುರು ಹಿರಿಯರು, ಗಣ್ಯರು, ಪಂಡಿತರು, ಜ್ಞಾನಿಗಳು, ತಿಳಿದವರು ಹೀಗೆ ಯಾರೇ ಮಹನೀಯ ವ್ಯಕ್ತಿಗಳು ಹೇಳುವುದನ್ನು ಆಸಕ್ತಿಯಿಂದ, ಏಕಾಗ್ರತೆಯಿಂದ ಆಲಿಸಿ ಕೇಳಿಸಿಕೊಳ್ಳಬೇಕು. ಏಕಾಗ್ರತೆಯೇ ಗುರಿ ಸಾಧನೆಗೆ ಹೆದ್ದಾರಿ ಎಂದು ಕಿವಿಮಾತು ಹೇಳಿದರು. ಖ್ಯಾತ ಶಿಕ್ಷಣ ತಜ್ಞರೂ ಹಾಗೂ ಸಂಪನ್ಮೂಲ ವ್ಯಕ್ತಿಗಳಾದ ಸದಾನಂದಮೂರ್ತಿ ಅವರು ಫೋಕಸ್ ಸಂಸ್ಥೆಯ ದ್ಯೇಯೋದ್ದೇಶಗಳ ಸಂಕ್ಷಿಪ್ತ ಪರಿಚಯದೊಡನೆ ಸಾಧಕರ ಗುರಿ, ಸ್ವತಂತ್ರ ಚಿಂತನೆ, ಶಕ್ತಿ ಸಾಮರ್ಥ್ಯ, ಆಸಕ್ತಿ, ವ್ಯಕ್ತಿತ್ವ ವಿಕಸನ, ಸತತ ಅಭ್ಯಾಸ, ಶ್ರೇಯಸ್ಸು, ಪ್ರೇಯಸ್ಸು ಹೀಗೆ ಒಟ್ಟಾರೆ ಸಾಧಕರಿಗೆ ವಿದ್ಯಾಭ್ಯಾಸದೊಡನೆ ಸ್ವತಂತ್ರ ಚಿಂತನೆ, ಪೂರ್ಣ ಪ್ರಮಾಣದ ಸಾಮರ್ಥ್ಯದ ವಿಕಾಸ ಮತ್ತು ಏಕಾಗ್ರತೆಯಂತಹ ಗುಣಗಳನ್ನು ಬೆಳೆಸಲು ಸಹಕಾರಿಯಾಗುವ ಜ್ಞಾನ ಪೂರ್ಣವಾದ ವಿಷಯಗಳನ್ನೊಳಗೊಂಡ ಸುಧೀರ್ಘವಾದ ಉಪನ್ಯಾಸ ನೀಡಿದರು. ಶ್ರೀ ಶಾರದಾ ಪೌಢಶಾಲೆಯ ಮುಖ್ಯೋಪಾಧ್ಯಾಯ ಶಿವ ಸ್ವಾಮಿ ಅವರು, ವಿವೇಕವಂತ ಸಾಧಕ ವಿದ್ಯಾರ್ಥಿಗಳು ಹೇಗಿರಬೇಕೆಂಬುದರ ಬಗ್ಗೆ ಹಿತ ನುಡಿ ಹೇಳಿದರು.
ಪ್ರಾರಂಭದಲ್ಲಿ ಹಿಮಾಲಯ ಪ್ರತಿಷ್ಠಾನದ ಅಧ್ಯಕ್ಷ ಲೇಖಕ ಎನ್.ಅನಂತ, ನಗರಪಾಲಿಕೆ ಮಾಜಿ ಸದಸ್ಯ ಹಾಗೂ ವಕೀಲ ಎಂ.ಸುನಿಲ್, ಫೋಕಸ್ ಇನ್ಸ್ಟಿಟ್ಯೂಟ್ ಸಂಸ್ಥೆಯ ಸಂಸ್ಥಾಪಕ ಪ್ರಭುದೇವ, ಸುಗುಣಾ ಪ್ರಭುದೇವ, ಮೈಸೂರು ಕನ್ನಡ ವೇದಿಕೆ ಅಧ್ಯಕ್ಷ ಎಸ್.ಬಾಲಕೃಷ್ಣ, ಶ್ರೀ ಬಸವೇಶ್ವರ ಸಾಂಸ್ಕೃತಿಕ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ಬಸವರಾಜೇಂದ್ರಸ್ವಾಮಿ, ಕನ್ನಡ ಹೋರಾಟಗಾರರಾದ ಕಿರಣ್, ಉತ್ತನಹಳ್ಳಿ ಮಹಾದೇವ, ಜಗದೀಶ್ ಇನ್ನಿತರರು ಭಾಗವಹಿಸಿದ್ದರು.