Friday, April 11, 2025
Google search engine

Homeಸ್ಥಳೀಯತಂಬಾಕು ನಿಯಂತ್ರಣ ಕಾರ್ಯ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ : ಜಿಲ್ಲಾಧಿಕಾರಿ ಸೂಚನೆ

ತಂಬಾಕು ನಿಯಂತ್ರಣ ಕಾರ್ಯ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ : ಜಿಲ್ಲಾಧಿಕಾರಿ ಸೂಚನೆ

ಚಾಮರಾಜನಗರ: ಜಿಲ್ಲೆಯಾದ್ಯಂತ ತಂಬಾಕು ನಿಯಂತ್ರಣ ಕಾರ್ಯ ಚಟುವಟಿಕೆಗಳನ್ನು (ಕೋಟ್ಪಾ-2003) ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಂತೆ ಜಿಲ್ಲಾಧಿಕಾರಿ ಸಿ.ಟಿ. ಶಿಲ್ಪಾನಾಗ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಜಿಲ್ಲಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಅಕ್ರಮ ತಂಬಾಕು ಮಾರಾಟ ಜಾಸ್ತಿಯಾಗುತ್ತಿದ್ದು ಸಂಬಂಧಪಟ್ಟ ಅಧಿಕಾರಿಗಳು ನಿಗಾ ವಹಿಸಬೇಕು. ಮಲೆ ಮಹದೇಶ್ವರ ಬೆಟ್ಟದಲ್ಲಿ ಹಲವಾರು ಪ್ರಕರಣಗಳು ಕಂಡು ಬಂದಿದೆ. ಪಟ್ಟಣ ಹಾಗೂ ಹಳ್ಳಿಗಳಲ್ಲಿ ತಂಬಾಕು ಮಾರಾಟ ಹಾಗೂ ಸೇವನೆಗಳ ಕುರಿತ ದುಷ್ಪರಿಣಾಮಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸಲು ಕ್ರಮವಹಿಸಬೇಕು. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಹಾಗೂ ಸಂಬಂಧಪಟ್ಟ ಇತರೆ ಇಲಾಖೆಗಳು ಮುಂದಾಗಬೇಕು ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು

ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ತಂಬಾಕು ಸೇವನೆಯಿಂದ ಆಗುವ ಅನಾಹುತಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನಡೆಯುವ ಗ್ರಾಮಸಭೆ ಹಾಗೂ ಮಕ್ಕಳ ಗ್ರಾಮಸಭೆಗಳಲ್ಲಿ ತಂಬಾಕು ನಿಯಂತ್ರಣದ ಕುರಿತು ತಿಳಿ ಹೇಳಬೇಕು. ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಅಗತ್ಯ ಕ್ರಮಗಳ ಬಗ್ಗೆ ಚರ್ಚಿಸಿ ತಂಬಾಕು ನಿಯಂತ್ರಣಕ್ಕಾಗಿ ಶ್ರಮಿಸಬೇಕು ಎಂದರು.

ಸರ್ಕಾರಿ ಕಚೇರಿ, ಸಾರ್ವಜನಿಕ ಸ್ಥಳ, ಶಾಲಾ ಕಾಲೇಜು ಹಾಗೂ ಇನ್ನಿತರ ಸ್ಥಳಗಳಲ್ಲಿ ತಂಬಾಕು ದುಷ್ಪರಿಣಾಮಗಳ ಬಗ್ಗೆ ಭಿತ್ತಿ ಪತ್ರಗಳನ್ನು ಅಂಟಿಸಬೇಕು. ಶಾಲಾ ಮಟ್ಟದಲ್ಲಿ 13 ರಿಂದ 18 ವರ್ಷದ ಮಕ್ಕಳಿಗೆ ತಂಬಾಕು ಸೇವನೆಯಿಂದ ಆರೋಗ್ಯದಲ್ಲಿ ಉಂಟಾಗುವ ಬದಲಾವಣೆಗಳ ಬಗ್ಗೆ ತಿಳಿಸಬೇಕು. ಶಾಲಾ ಹಂತದಲ್ಲಿ ಮಕ್ಕಳಿಗೆ ತಂಬಾಕಿನ ನಿಷೇಧದ ಬಗ್ಗೆ ಅರಿವು ಮೂಡಿಸಬೇಕು. ಯುವ ಜನತೆಯು ಭವಿಷ್ಯತ್ತಿನಲ್ಲಿ ತಂಬಾಕು ಸೇವನೆಗಳಿಗೆ ಒಳಗಾಗದಂತೆ ಜಾಗೃತಿವಹಿಸಬೇಕು ಎಂದು ಜಿಲ್ಲಾಧಿಕಾರಿ ಸಿ.ಟಿ. ಶಿಲ್ಪಾನಾಗ್ ಅವರು ಸೂಚಿಸಿದರು.
ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಸರಸ್ವತಿ ಅವರು ಮಾತನಾಡಿ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ಮಂಡ್ಯ ಜಿಲ್ಲೆಯಲ್ಲಿ ತಂಬಾಕು ಮುಕ್ತ ಗ್ರಾಮ ಪಂಚಾಯಿತಿ ಕಾರ್ಯಕ್ರಮಗಳು ಯಶಸ್ವಿಯಾಗಿವೆ. ಅದೇ ಮಾದರಿಯಲ್ಲಿ ಜಿಲ್ಲೆಯಲ್ಲಿಯೂ ಸಹ ಗ್ರಾಮ ಪಂಚಾಯಿತಿಗಳನ್ನು ತಂಬಾಕಿನಿಂದ ಮುಕ್ತಗೊಳಿಸುವಲ್ಲಿ ಕಾರ್ಯ ಯೋಜನೆ ರೂಪಿಸಲಾಗುವುದು ಎಂದರು.

ಜಿಲ್ಲಾ ಸರ್ವಲೆನ್ಸ್ ಅಧಿಕಾರಿ ಡಾ. ನಾಗರಾಜು ಅವರು ಮಾತನಾಡಿ ಬೀಡಿ, ಸಿಗರೇಟ್, ಗುಟ್ಕಾ ದಂತಹ ತಂಬಾಕು ಉತ್ಪನ್ನ ಸೇವೆನೆಯಿಂದ ಪ್ರತೀ ವರ್ಷ ವಿಶ್ವದಲ್ಲಿ 70 ಲಕ್ಷ ಜನ ಸಾವಿಗೀಡಾಗುತ್ತಿದ್ದು, ಭಾರತದಲ್ಲಿ ಪ್ರತೀ ವರ್ಷ 9-10 ಲಕ್ಷ ಜನರು ಮರಣ ಹೊಂದುತ್ತಿದ್ದಾರೆ. ತಂಬಾಕು ಸೇವನೆ ಹಾಗೂ ಮಾರಾಟದ ಮೇಲೆ ನಿಯಂತ್ರಣ ಏರಿ ಮುಂದಿನ ಪೀಳಿಗೆಗೆ ಉತ್ತಮ ಜೀವನ ನೀಡಬೇಕಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಘಟಕ ಕಾರ್ಯೋನ್ಮುಖವಾಗಿದೆ ಎಂದು ತಿಳಿಸಿದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕೆ.ಎಂ. ವಿಶ್ವೇಶ್ವರಯ್ಯ, ನಗರಸಭೆ ಆಯುಕ್ತರಾದ ರಾಮ್‍ದಾಸ್, ಜಿಲ್ಲಾ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕರಾದ ಸುಧಾ, ಇತರೆ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು. ಇದೇ ವೇಳೆ ರಾಜ್ಯ ತಂಬಾಕು ನಿಯಂತ್ರಣ ಘಟಕದ ವತಿಯಿಂದ ನಡೆಸಿದ ಕೋಟ್ಪಾ ಅನುಸರಣಾ ಸಮೀಕ್ಷಾ ವರದಿಯನ್ವಯ ಚಾಮರಾಜನಗರ ಜಿಲ್ಲೆಯು ಶೇ. 95ರಷ್ಟು ಕೋಟ್ಪಾ 4,5,6,7,8,9 ಸೆಕ್ಷನ್‍ಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ ಕೋಟ್ಪಾ ಉನ್ನತ ಅನುಷ್ಠಾನ ಜಿಲ್ಲೆಯಾಗಿ ಆಯ್ಕೆಯಾಗಿರುವ ಬಗ್ಗೆ ರಾಜ್ಯ ತಂಬಾಕು ನಿಯಂತ್ರಣ ಘಟಕವು ನೀಡಿರುವ ಪ್ರಶಂಸÀನಾ ಪ್ರಮಾಣ ಪತ್ರವನ್ನು ಜಿಲ್ಲಾಧಿಕಾರಿ ಸಿ.ಟಿ. ಶಿಲ್ಪಾನಾಗ್ ಅವರು ಅಧಿಕಾರಿಗಳಿಗೆ ವಿತರಿಸಿದರು

RELATED ARTICLES
- Advertisment -
Google search engine

Most Popular