ವರದಿ: ಎಡತೊರೆ ಮಹೇಶ್
ಮೈಸೂರು ದಕ್ಷಿಣ ಪೊಲೀಸ್ ಠಾಣೆಯ ಶೇಖರ್ ಎಂ.ಎಲ್, ವರುಣ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಚೇತನ್ ವಿ, ಸೆನ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಸಿದ್ದೇಶ್, ಎಚ್.ಡಿ ಕೋಟೆ ಪೊಲೀಸ್ ಠಾಣೆಯ ಕಾನ್‌ಸ್ಟೆಬಲ್ ಸೈಯದ್ ಕಬೀರುದ್ದೀನ್ ಸಿಸಿಬಿ ಠಾಣೆ ಹೆಡ್ ಕಾನ್‌ಸ್ಟೆಬಲ್ ಸಲೀಂ ಪಾಷಾ ಸರ್ಕಾರ ನೀಡುವ 2023ನೇ ಸಾಲಿನ ಮುಖ್ಯಮಂತ್ರಿ ಪದಕ ಪಡೆದಿದ್ದಾರೆ.
ಶೇಖರ್ ಎಂ.ಎಲ್ ಅವರು 2003ರಲ್ಲಿ ಇಲಾಖೆಗೆ ಸೇರಿ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ, ಮೈಸೂರು ನಗರ, ಚಾಮರಾಜನಗರದಲ್ಲಿ ಕರ್ತವ್ಯ ನಿರ್ವಹಿಸಿ ಪ್ರಸ್ತುತ ಮೈಸೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಇನ್‌ಸ್ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸೈಯದ್ ಕಬೀರುದ್ದೀನ್ ಹುಣಸೂರು ತಾಲ್ಲೂಕಿನ ಮರದೂರಿನವರು. 2009ರಲ್ಲಿ ಇಲಾಖೆಗೆ ಸೇರಿ ಹುಣಸೂರು, ಪಿರಿಯಾಪಟ್ಟಣ, ಸರಗೂರು, ಎಚ್.ಡಿ.ಕೋಟೆಯಲ್ಲಿ ಕೆಲಸ ಮಾಡಿದ್ದಾರೆ.
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಹಂಗ್ರಾಪುರದ ಚೇತನ್ ವಿ. 2010ರಲ್ಲಿ ಇಲಾಖೆಗೆ ಸೇರಿದ್ದು, ನಂತರ ಕಲಬುರಗಿ, ಕಾರವಾರ, ಬೀಚನಳ್ಳಿ, ನಂಜನಗೂಡು, ಪಿರಿಯಾಪಟ್ಟಣ, ಮಡಿಕೇರಿ ಗ್ರಾಮಾಂತರ, ಕೆ.ಆರ್.ನಗರ, ಕೊಳ್ಳೇಗಾಲದಲ್ಲಿ ಕರ್ತವ್ಯ ನಿರ್ವಹಿಸಿದ್ದು, ಪ್ರಸ್ತುತ ವರುಣ ಠಾಣೆಯಲ್ಲಿ ಸಬ್ ಇನ್‌ಸ್ಪೆಕ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ.
ಹಾಸನ ಜಿಲ್ಲೆಯ ಆಲೂರಿನ ಸಿದ್ದೇಶ್ 2017ರಲ್ಲಿ ಇಲಾಖೆಗೆ ಸೇರಿದ್ದು ನಜರ್‌ಬಾದ್, ಸೆನ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಸಲೀಂ ಪಾಷಾ ಅವರು ಮೈಸೂರು, ನಜರ್‌ಬಾದ್, ವಿಜಯನಗರ ಠಾಣೆ, ಮೇಟಗಳ್ಳಿ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ ಬಳಿಕ ಸಿಸಿಬಿ ಠಾಣೆಯಲ್ಲಿ ಹೆಡ್ ಕಾನ್‌ಸ್ಟೆಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಸದ್ಯ ಕರ್ತವ್ಯ ಲೋಪ ಆರೋಪದ ಮೇಲೆ ಅಮಾನತಿನಲ್ಲಿದ್ದಾರೆ.