ಮೈಸೂರು: ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆಯಲು ಪ್ರಯತ್ನಶೀಲತೆ ಬೆಳೆಸಿಕೊಳ್ಳಬೇಕು. ಇದರಿಂದ ಸಾಧನೆ ಸಿದ್ದಿಸಿ ಯಶಸ್ಸು ತಾನಾಗೇ ಬರುತ್ತದೆ ಎಂದು ಕಲಾವಿದ ಮತ್ತು ವಕೀಲ ವಿಕಾಸ್ ಉತ್ತಯ್ಯ ತಿಳಿಸಿದರು.
ಎಂಎಂಕೆ ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಹಿಳಾ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಎರಡು ದಿನಗಳ ಪ್ರಭಿಗ್ಯಾನ್ ಅಂತರ ಕಾಲೇಜು ಉತ್ಸವ ಉದ್ಘಾಟಿಸಿ ಉದ್ಘಾಟಿಸಿ ಮಾತನಾಡಿದ ಅವರು, ಶಿಸ್ತು ಮತ್ತು ಗುಣ ಸ್ವಭಾವ ವ್ಯಕ್ತಿತ್ವ ರೂಪಿಸುವಲ್ಲಿ ಪೋಷಕರು ಮತ್ತು ಶಿಕ್ಷಕರು ಬಹಳ ಶ್ರಮ ವಹಿಸುವುದರಿಂದ ಅವರುಗಳ ಪರಿಶ್ರಮಕ್ಕೆ ನಿಮ್ಮ ಫಲಿತಾಂಶವೇ ಸಾಕ್ಷಿಯಾಗುತ್ತದೆ. ಒಳ್ಳೆಯತನದ ವ್ಯಕ್ತಿಕ್ವ ಎಂದಿಗೂ ಗೌರವಕ್ಕೆ ಪಾತ್ರವಾಗುತ್ತದೆ. ಇಂದಿನ ಪೋಷಕರು ತಮ್ಮ ಮಕ್ಕಳಿಗೆ ಆಸ್ತಿ, ಹಣ ಸಂಪಾದಿಸುವುದಕ್ಕಿಂತ ಉತ್ತಮ ಶಿಕ್ಷಣ ಮತ್ತು ಸಂಸ್ಕಾರ ನೀಡಿದರೆ ಅವರು ನಿಜವಾದ ಶ್ರೀಮಂತರಾಗುತ್ತಾರೆಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಪ್ರೊ.ಸಾಯಿನಾಥ್ ಮಲ್ಲಿಗೆಮಾಡು, ಶಿಕ್ಷಣದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ವ್ಯಕ್ತಿತ್ವ ವಿಕಸನವಾಗುತ್ತದೆ. ಪ್ರಭಿಗ್ಯಾನ್ ಉತ್ಸವ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾದ ವಿಜ್ಞಾನ, ವಾಣಿಜ್ಯ ವ್ಯವಹಾರ, ಕಲೆ, ನೃತ್ಯ ಮೊದಲಾದ ಸಂಸ್ಕೃತಿಯ ಎಲ್ಲಾ ಪ್ರತಿಭೆಗಳನ್ನು ಅನಾವರಣಗೊಳಿಸುತ್ತದೆ. ಹೀಗಾಗಿ ಇದರ ಸದುಪಯೋಗವನ್ನು ಎಲ್ಲರೂ ಸ್ಪರ್ಧಾ ಮನೋಭಾವನೆಯಿಂದ ಸ್ವೀಕರಿಸಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಪ್ರೊ.ನಯನ ಕುಮಾರಿ, ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಪ್ರೊ.ರಜಿತಾ, ಸಾಂಸ್ಕೃತಿಕ ಸಮಿತಿ ಸಂಚಾಲಕ ಡಾ.ವಿನೋದ, ವಿದ್ಯಾರ್ಥಿ ಸಂಘದ ಅಧ್ಯಕ್ಷೆ ನಿಹಾರಿಕ ಜೋಷಿ ಉಪಸ್ಥಿತರಿದ್ದರು.