ಬೆಂಗಳೂರು: ರಾಯಚೂರು ಜಿಲ್ಲೆಯ ಮಾನ್ವಿ ಹಾಗೂ ಕಲಬುರಗಿ, ತಮಿಳುನಾಡು ಹಾಗೂ ಉತ್ತರಪ್ರದೇಶದ ಬನಾರಸ್ ನಲ್ಲಿ ಸೋಮವಾರ ದುಲ್‌ಹಜ್ ತಿಂಗಳ ಚಂದ್ರದರ್ಶನವಾದ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಜೂ.29ರಂದು ರಾಜ್ಯಾದ್ಯಂತ ಈದುಲ್ ಅಝ್ಹಾ ಆಚರಣೆ ಮಾಡಲು ನಿರ್ಧರಿಸಲಾಗಿದೆ ಎಂದು ಅಮೀರೆ ಶರೀಅತ್ ಮೌಲಾನ ಸಗೀರ್ ಅಹ್ಮದ್ ಖಾನ್ ರಶಾದಿ ತಿಳಿಸಿದ್ದಾರೆ.
ಸೋಮವಾರ ನಗರದ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ರಾಜ್ಯ ವಕ್ಸ್ ಮಂಡಳಿಯಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರೀಯ ಚಂದ್ರದರ್ಶನ ಸಮಿತಿಯ ಸಭೆಯ ಬಳಿಕ ಅವರು ಸುದ್ದಿಗಾರರಿಗೆ ಈ ಮಾಹಿತಿ ನೀಡಿದರು. ಸಭೆಯಲ್ಲಿ ಚಂದ್ರದರ್ಶನ ಸಮಿತಿಯ ಸದಸ್ಯರಾದ ಮೌಲಾನಾ ಮತ್ತೂ ಇಮ್ರಾನ್ ರಶಾದಿ, ಮುಷ್ಠಿ ಇಪ್ಲಿಖಾರ್ ಅಹ್ಮದ್ ಖಾಸಿ, ಮೌಲಾನಾ ಅಬ್ದುಲ್ ಖದೀರ್ ವಾಜಿದ್, ಮೌಲಾನಾ ಏಜಾಝ್ ಅಹ್ಮದ್ ನದ್ವಿ, ಖಾರಿ ಮುಹಮ್ಮದ್ ಝಲ್ಪಿಖರ್ ರಝಾ ನೂರಿ ಹಾಗೂ ಮೌಲಾನಾ ಸೈಯದ್ ಮನ್ಸೂರ್ ರಝಾ ಆಬಿದಿ ಉಪಸ್ಥಿತರಿದ್ದರು.
ಇದೇವೇಳೆ ದ.ಕ. ಉಡುಪಿ ಮತ್ತು ಭಟ್ಕಳದಲ್ಲಿ ಜೂ.29ರಂದು ಈದುಲ್ ಅಝ್ಹಾ (ಬಕ್ರೀದ್) ಆಚರಿಸಲಾಗುವುದು ಎಂದು ಖಾಝಿ ಪ್ರತ್ಯೇಕ ಪ್ರಕಟನೆಯೊಂದರಲ್ಲಿ ತಿಳಿಸಿದ್ದಾರೆ.