ಮಂಡ್ಯ: ಮಳೆಯ ಕೊರತೆಯಿಂದ ಜಿಲ್ಲೆಯ ಎಲ್ಲಾ ತಾಲ್ಲೂಕು ಬರಪೀಡಿತ ಎಂದು ಘೋಷಣೆಯಾಗಿದ್ದು, ಎಲ್ಲಾ ತಾಲ್ಲೂಕು ತಹಶೀಲ್ದಾರ್ ತಮ್ಮ ತಾಲ್ಲೂಕಿನ ಶಾಸಕರ ಅಧ್ಯಕ್ಷತೆಯಲ್ಲಿ ತಾಲ್ಲೂಕಿನಲ್ಲಿ ಕುಡಿಯುವ ನೀರು, ಮೇವು ಸೇರಿದಂತೆ ಇನ್ನಿತರ ಪರಿಸ್ಥಿತಿಗಳ ಕುರಿತು ಸಭೆ ನಡೆಸಿ ವರದಿಯನ್ನು ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಡಾ: ಕುಮಾರ ಅವರು ತಿಳಿಸಿದರು.
ಅವರು ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು. ಕುಡಿಯುವ ನೀರನ್ನು ಟ್ಯಾಂಕರ್ ಮೂಲಕ ಸರಬರಾಜು ಮಾಡುವ ಮುನ್ನ ಗ್ರಾಮಗಳಲ್ಲಿ ಖಾಸಗಿ ಬೋರ್‌ವೆಲ್ ಮೂಲಕ ನೀರು ದೊರಕುವುದಿಲ್ಲ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಬೇಕು. ಟ್ಯಾಂಕರ್ ಮೂಲಕ ನೀರು ಪಡೆಯಲು ಟೆಂಡರ್ ಕರೆದು ನಿಗದಿ ಪಡಿಸಿದ ದರಕ್ಕೆ ಪಡೆಯಬೇಕು. ಟ್ಯಾಂಕರ್ ಆ?ಯಪ್ ಮೂಲಕ ಅದರ ವಿವರ ಅಪ್‌ಲೋಡ್ ಮಾಡಿ ನಂತರ ಸರಬರಾಜು ಮಾಡಬೇಕು ಎಂದರು.
ಬರ ನಿರ್ವಹಣೆಗೆ ಸಂಬಂಧಿಸಿದಂತೆ ಎಲ್ಲಾ ತಾಲ್ಲೂಕುಗಳಿಗೆ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ.ನೋಡಲ್ ಅಧಿಕಾರರಿಗಳು ತಪ್ಪದೇ ವಾರಕೊಮ್ಮೆ ತಾಲ್ಲೂಕಿಗೆ ಭೇಟಿ ನೀಡಿ ವರದಿ ನೀಡಬೇಕು ಎಂದರು. ಕುಡಿಯುವ ನೀರಿಗೆ ಸಂಬಂಧಿಸಿದಂತೆ ನಾಗಮಂಗಲ ತಾಲ್ಲೂಕಿನಲ್ಲಿ ಎ. ಶಾನಬೋಗನಹಳ್ಳಿ, ಮುದ್ದನಹಳ್ಳಿ ಹಾಗೂ ಒಣಕೆರೆ ಗ್ರಾಮಗಳಿಗೆ ಮಳವಳ್ಳಿ ತಾಲ್ಲೂಕಿನಲ್ಲಿ ಬಸವನಹಳ್ಳಿ ಗ್ರಾಮಕ್ಕೆ ಖಾಸಗಿ ಬೋರ್ ವೆಲ್ ಮೂಲಕ ನೀರು ಒದಗಿಸಲಾಗುತ್ತಿದೆ. ಕೆ.ಆರ್.ಪೇಟೆಯಲ್ಲಿ ಕೂಟಗಳ್ಳಿ ಟ್ಯಾಂಕರ್ ಮೂಲಕ ಕುಡಿಯುವ ನೀರು ನೀಡಲಾಗುತ್ತಿದೆ. ನಗರ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಇಲ್ಲ ಎಂದು ಸಂಬಂಧಿಸಿದ ತಹಶೀಲ್ದಾರ್‌ಗಳು ಸಭೆಗೆ ಮಾಹಿತಿ ನೀಡಿದರು. ಜಿಲ್ಲಾಧಿಕಾರಿಗಳು ಮಾತನಾಡಿ ಟ್ಯಾಂಕರ್‌ಗಳ ಮೂಲಕ ನೀರು ನೀಡುವಾಗ ನೀರು ಪಡೆಯುವ ಮೂಲ ಹಾಗೂ ಟ್ಯಾಂಕರಗಳ ಸ್ವಚ್ಛತೆ ಹಾಗೂ ಕುಡಿಯುವ ನೀರಿನ ಗುಣಮಟ್ಟವನ್ನು ಪರಿಶೀಲಿಸಿ ದೃಢೀಕರಣ ಪಡೆದ ನಂತರ ಸರಬರಾಜು ಮಾಡಬೇಕು ಎಂದರು.
ಮೇವು ಬೆಳೆ ಜಿಲ್ಲೆಯಿಂದ ಅನುಮೋದನೆ ಕೋರಿ ಹೊಸ ಯೋಜನೆ ಸಲ್ಲಿಕೆ: ಜಿಲ್ಲೆಯಲ್ಲಿ ವಿ.ಸಿ.ಫಾರಂ ಅಧೀನದಲ್ಲಿರುವ ೧೫ ಎಕರೆಯನ್ನು ಒಪ್ಪಂದ ಮಾಡಿಕೊಂಡು ಮೇವು ಬೆಳೆಯಲು ಯೋಜನೆ ಸಿದ್ಧಪಡಿಸಿದ್ದು, ಅನುಮೋದನೆ ಕೋರಿ ಸರ್ಕಾರಕ್ಕೆ ಸಲ್ಲಿಸಲಾಗುವುದು. ಸರ್ಕಾರ ಒಪ್ಪಿಗೆ ನೀಡಿದರೆ ವಿ.ಸಿ ಫಾರಂ ವಿಜ್ಞಾನಿಗಳ ಸಹಕಾರ ಪಡೆದು ಇಲ್ಲಿ ೭೫೦ ಟನ್ ಮೇವು ಬೆಳೆಯಬಹುದು ಎಂದು ಅಂದಾಜಿಸಲಾಗಿದೆ. ನೀರಾವರಿ ಹಾಗೂ ಫೆನ್ಸಿಂಗ್ ಇರುವ ತೋಟಗಾರಿಕೆ ಇಲಾಖೆಯ ಅಧೀನದಲ್ಲಿರುವ ಎರಡು ಎಕರೆ ಭೂಮಿಯನ್ನು ತಾಲ್ಲೂಕುವಾರು ಗುರುತಿಸಿ ಮೇವಿನ ಬೆಳೆ ಬೆಳೆಯಲು ಸಹ ಯೋಜನೆಯಲ್ಲಿ ಸೇರಿಸಲಾಗಿದೆ ಎಂದರು.
ಬರ ಹಾಗೂ ಬೇಸಿಗೆಯಲ್ಲಿ ಸಾಮಾನ್ಯವಾಗಿ ಬೇಕಿರುವ ಔಷಧಿಗಳು, ಫ್ಲೂಯಿಡ್‌ಗಳು ಸೇರಿದಂತೆ ಆರೋಗ್ಯ ಇಲಾಖೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದರು. ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್ ಯತೀಶ್, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಆನಂದ್, ಉಪವಿಭಾಗಾಧಿಕಾರಿ ಶಿವಮೂರ್ತಿ, ನಂದೀಶ್, ಪಶುವೈದ್ಯಾಧಿಕಾರಿ ಡಾ: ಸುರೇಶ್, ಜಿಲ್ಲಾ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೆಶಕಿ ಎಂ. ವಿ ತುಷಾರಮಣಿ, ತಹಶೀಲ್ದಾರ್ ಶಿವಕುಮಾರ್ ಬಿರಾದರ ಇನ್ನಿತರಿದ್ದರು.