ಮಂಡ್ಯ: ಸರ್ಕಾರದಿಂದ ರೈತರಿಗೆ ನೀಡಲಾಗುವ ಬರ ಪರಿಹಾರ ಹಣವನ್ನು ರೈತರ ಖಾತೆಗೆ ಜಮೆ ಮಾಡಲು ರೈತರು ಫ್ರೂಟ್ಸ್ ಐ.ಡಿ ಯಲ್ಲಿ ನೊಂದಣಿ ಮಾಡಿಕೊಂಡು ಜಮೀನಿನ ವಿವರ ಅಪ್ ಲೋಡ್ ಮಾಡುವುದು ಕಡ್ಡಾಯವಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಡಾ: ಕುಮಾರ ಅವರು ತಿಳಿಸಿದರು. ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು.
ನಾಲ್ಕು ದಿನದಲ್ಲಿ ಶೇ ೧೦೦ ಸಾಧನೆಯಾಗಬೇಕು ಜಿಲ್ಲೆಯಲ್ಲಿ ೧೬೧೧೩೩೭ ಪ್ಲಾಟ್‌ಗಳಿದ್ದು, ೧೨೧೧೬೨೬ ಪ್ಲಾಟ್ ಗಳು ನೊಂದಣಿಯಾಗಿ ಶೇ ೭೫.೨ ಸಾಧನೆಯಾಗಿರುತ್ತದೆ. ಬರ ಪರಿಹಾರ ಹಣ ಬಿಡುಗಡೆಯಾದರೆ ಪಾವತಿ ಕೆಲಸ ಪ್ರಾರಂಭವಾಗುತ್ತದೆ. ಈ ಸಮಯದಲ್ಲಿ ನೊಂದಣಿ ಕಷ್ಟ್ಟಕರವಾಗಿರುತ್ತದೆ. ಅಧಿಕಾರಿಗಳು ಹೆಚ್ಚಿನ ನಿಗಾ ವಹಿಸಿ ನಾಲ್ಕು ದಿನಗಳಲ್ಲಿ ರೈತರ ಪ್ಲಾಟ್ ವಿವರ ಅಪ್‌ಲೋಡ್ ಮಾಡಿ ಶೇ.೧೦೦ ಸಾಧನೆ ಯಾಗಬೇಕು ಎಂದರು. ರೈತರಿಗೆ ಹಲವಾರು ಬಾರಿ ಫ್ರೂಟ್ಸ್ ಐ.ಡಿ ಯಲ್ಲಿ ನೊಂದಣಿ ಮಾಡಿಕೊಂಡು ವಿವರ ಅಪ್ ಲೋಡ್ ಮಾಡುವಂತೆ ತಿಳಿಸಲಾಗಿದೆ. ಆದರೂ ಸಹ ೩೯೯೭೧೧ ಪ್ಲಾಟ್‌ಗಳು ನೊಂದಣಿ ಮಾಡಿಕೊಂಡಿರುವುದಿಲ್ಲ. ರೈತರು ಸಹ ಈ ಬಗ್ಗೆ ಕಾಳಜಿ ವಹಿಸಿ ತಮ್ಮ ಗ್ರಾಮದ ಕೃಷಿ, ಕಂದಾಯ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ ೪ ದಿನದೊಳಗಾಗಿ ನೊಂದಣಿ ಮಾಡಿಕೊಳ್ಳುವುದು ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ: ಹೆಚ್ ಎಲ್ ನಾಗರಾಜು, ಜಂಟಿ ಕೃಷಿ ನಿರ್ದೇಶಕ ಅಶೋಕ, ತೋಟಗಾರಿಕೆ ಉಪನಿರ್ದೇಶಕಿ ರೂಪಶ್ರೀ, ತಹಶೀಲ್ದಾರ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.