ಮೈಸೂರು : ಹಾಸಿಗೆ ಹಿಡಿದ ವೃದ್ದೆಗೆ ಸೇವೆ ಸಲ್ಲಿಸುತ್ತಿದ್ದ ಹೋಂ ನರ್ಸ್ ೬೦ ಗ್ರಾಂ ತೂಕದ ಚಿನ್ನದ ಸರ ಲಪಟಾಯಿಸಿ ಪರಾರಿಯಾದ ಕೇವಲ ೪೮ ಗಂಟೆಗಳಲ್ಲಿ ಸಿಕ್ಕಿಬಿದ್ದ ಘಟನೆ ಸರಸ್ವತಿಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ನಿವೇದಿತಾ ನಗರದಲ್ಲಿ ಬೆಳಕಿಗೆ ಬಂದಿದೆ. ಆಶಾ(೩೧) ಬಂಧಿತ ಆರೋಪಿ. ನಿವೇದಿತಾ ನಗರದ ನರಸಿಂಹಶೆಟ್ಟಿ ಅವರ ಪತ್ನಿ ಸಾವಿತ್ರಿ(೭೦) ಹಾಸಿಗೆ ಹಿಡಿದಿರುವ ವೃದ್ದೆ. ಇವರ ಪಾಲನೆಗಾಗಿ ಬೋಗಾದಿ ನಿವಾಸಿ ಆಶಾರನ್ನ ಹೋಂ ನರ್ಸ್ ಆಗಿ ಏಜೆನ್ಸಿ ಮೂಲಕ ನೇಮಕ ಮಾಡಿಕೊಳ್ಳಲಾಗಿತ್ತು.
ಸುಮಾರು ೧೫ ದಿನಗಳ ಕಾಲ ಸೇವೆ ಮಾಡಿದ ಆಶಾ ಎರಡು ದಿನಗಳ ಹಿಂದೆ ಸಾವಿತ್ರಿ ಅವರು ಧರಿಸಿದ್ದ ೬೦ ಗ್ರಾಂ ತೂಕದ ಚಿನ್ನದ ಸರ ಲಪಟಾಯಿಸಿ ಪರಾರಿಯಾಗಿದ್ದಳು. ಮೊಬೈಲ್ ಮೂಲಕ ಸಂಪರ್ಕಿಸಲು ಯತ್ನಿಸಿದಾಗ ಸ್ವಿಚ್ ಆಫ್ ಬಂದಿತ್ತು. ಕೂಡಲೇ ನರಸಿಂಹಶೆಟ್ಟಿ ಅವರು ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಆಶಾ ವಿರುದ್ದ ಪ್ರಕರಣ ದಾಖಲಿಸಿದ್ದರು. ಕಾರ್ಯಾಚರಣೆ ನಡೆಸಿದ ಸರಸ್ವತಿಪುರಂ ಠಾಣೆ ಇನ್ಸ್ಪೆಕ್ಟರ್ ರವೀಂದ್ರ ಹಾಗೂ ಮಹಿಳಾ ಪಿಎಸ್ಸೈ ಲತಾ ರವರು ಕೇವಲ ೪೮ ಗಂಟೆಗಳಲ್ಲಿ ಆರೋಪಿಯನ್ನ ಸೆರೆಹಿಡಿದು ಚಿನ್ನದ ಸರ ವಶಪಡಿಸಿಕೊಂಡಿದ್ದಾರೆ. ಈ ಸಂಭಂಧ ಸರಸ್ವವತಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಯನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.