ಚಿಂತಾಮಣಿ: ನಗರದ ಎನ್.ಆರ್.ಬಡಾವಣೆಯ ಯಾಜ್ಞ್ಯವಲ್ಕ್ಯ ದೇವಾಲಯದ ಸಮೀಪದ ರಸ್ತೆಯ ಪಕ್ಕದ ಕಸದ ಗುಡ್ಡೆಯಲ್ಲಿ ವ್ಯಕ್ತಿಯೊಬ್ಬರ ರುಂಡವನ್ನು ಕತ್ತರಿಸಿ ಬೇರ್ಪಡಿಸಿರುವ ಶವ ಶುಕ್ರವಾರ ಬೆಳಿಗ್ಗೆ ಪತ್ತೆಯಾಗಿದೆ.
ಕೊಲೆಯಾಗಿರುವ ವ್ಯಕ್ತಿಯನ್ನು ಶ್ರೀನಿವಾಸಪುರ ತಾಲ್ಲೂಕಿನ ಗೌಡನತಾತನಗಡ್ಡ ಗ್ರಾಮದ ನಿವಾಸಿ ಮುನಿಯಪ್ಪ(೬೫) ಎಂದು ಗುರುತಿಸಲಾಗಿದೆ. ಕಿಡಿಗೇಡಿಗಳು ಅವರ ತಲೆಯನ್ನು ಕತ್ತರಿಸಿ ಭೀಕರವಾಗಿ ಕೊಲೆ ಮಾಡಿದ್ದಾರೆ. ಅಲ್ಲೇ ಕೊಲೆ ಮಾಡಲಾಗಿದೆಯೇ ಅಥವಾ ಎಲ್ಲೋ ಕೊಲೆ ಮಾಡಿ ಅಲ್ಲಿಗೆ ತಂದು ಹಾಕಲಾಗಿದೆಯೇ ಎಂಬುದು ತನಿಖೆಯಿಂದ ತಿಳಿದುಬರಬೇಕಿದೆ.
ಶುಕ್ರವಾರ ಬೆಳಿಗ್ಗೆ ಕಸದಗುಡ್ಡೆಯಲ್ಲಿ ನಾಯಿಗಳು ರುಂಡವನ್ನು ಎಳೆದಾಡುತ್ತಿರುವುದನ್ನು ಕಂಡ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಡಿವೈಎಸ್ಪಿ ಪಿ.ಮುರಳೀಧರ್, ಇನ್ಸ್ ಸ್ಪೆಕ್ಟರ್ ವಿಜಿಕುಮಾರ್ ಹಾಗೂ ಬೆರಳಚ್ಚು ತಜ್ಞರ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಅಸ್ಪತ್ರೆಗೆ ಸಾಗಿಸಿದ್ದಾರೆ. ಪ್ರಕರಣವನ್ನು ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಕ್ರಮಕೈಗೊಂಡಿದ್ದಾರೆ. ಕೊಲೆಯಾಗಿರುವ ಮುನಿಯಪ್ಪಗೆ ಇಬ್ಬರು ಪತ್ನಿಯರಿದ್ದಾರೆ. ತಿಮ್ಮಂಪಲ್ಲಿಯಲ್ಲಿರುವ ಎರಡನೆಯ ಪತ್ನಿ ಹಾಗೂ ಅವರ ಮಗ ಶಿವರಾಜ್ ಮೇಲೆ ಅನುಮಾನವಿದೆ. ಆಗಾಗ ಜಗಳ ಮಾಡುತ್ತಿದ್ದರು. ನಿನ್ನೆಯೂ ಅವರು ಜಗಲವಾಡಿಕೊಂಡಿರುವ ಮಾಹಿತಿ ಇದೆ ಎಂದು ಮೊದಲ ಪತ್ನಿಯ ಮಗ ವೆಂಕಟೇಶ್ ತಿಳಿಸಿದರು.