ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಹಿರಿಯ ನಾಗರೀಕರು ಸದಾ ಚಟುವಟಿಕೆಯಿಂದಿದ್ದು, ಸಕಾಲದಲ್ಲಿ ವೈದ್ಯರ ಸಲಹೆ ಪಡೆದು ಚಿಕಿತ್ಸೆ ತೆಗೆದುಕೊಳ್ಳಬೇಕು ಆಗ ಹೆಚ್ಚು ಕಾಲ ಬದುಕುವುದರ ಜತೆಗೆ ಆರೋಗ್ಯವಂತರಾಗಿರಲು ಸಾಧ್ಯ ಎಂದು ಕೆಪಿಸಿಸಿ ಕಾರ್ಯಕಾರಿಣಿ ಸದಸ್ಯ ದೊಡ್ಡಸ್ವಾಮೇಗೌಡ ಹೇಳಿದರು.
ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಆರೋಗ್ಯ ಇಲಾಖೆ ವತಿಯಿಂದ ನಡೆದ ಹಿರಿಯ ನಾಗರೀಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ವಯೋ ವೃದ್ದರು ಆಹಾರ ಪದ್ದತಿಯನ್ನು ಬದಲಾವಣೆ ಮಾಡಿಕೊಂಡು ಮಿತ ಆಹಾರ ಸೇವನೆ ಮಾಡಿ ಆರೋಗ್ಯವಂತರಾಗಿರಬೇಕು ಎಂದರು.
ಹೃದಯ ಸಂಬoಧಿ ಮತ್ತು ಮಧುಮೇಹ ಹಾಗೂ ಸಕ್ಕರೆ ಖಾಯಿಲೆ ಇರುವವರು ಯಾವುದೇ ಕಾರಣಕ್ಕೂ ಒತ್ತಡಕ್ಕೆ ಒಳಗಾಗಬಾರದು ಮತ್ತು ಮಾನಸೀಕವಾಗಿ ಚಿಂತಿಸಬಾರದು ಎಂದು ಸಲಹೆ ನೀಡಿದ ದೊಡ್ಡಸ್ವಾಮೇಗೌಡ ಚಿಕಿತ್ಸೆ ಪಡೆಯುವ ಸಲುವಾಗಿ ಒಂದಷ್ಟು ಹಣವನ್ನು ಸಂಪಾದಿಸುವ ಸಮಯದಲ್ಲಿ ಕೂಡಿರಿಸಿಕೊಳ್ಳಬೇಕು ಎಂದು ತಿಳಿಸಿದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಡಿ.ನಟರಾಜ್ ಮಾತನಾಡಿ ಸರ್ಕಾರಗಳ ಯೋಜನೆಗಳು, ಶಿಕ್ಷಣ ಮತ್ತು ಆರೋಗ್ಯ ಇಲಾಖೆಯ ಕ್ರಮದಿಂದಾಗಿ ನಾಗರೀಕರಲ್ಲಿ ಸರಾಸರಿ ಆಯಸ್ಸು ಹೆಚ್ಚಾಗುತ್ತಿದ್ದು ೭೫ ಕೋಟಿ ಹಿರಿಯ ನಾಗರೀಕರು ಇದ್ದಾರೆ ಮುಂದೆ ಇದು ೧೫೦ ಕೋಟಿ ಆಗಲಿದೆಂದು ಅಂದಾಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ವೃದ್ದರಿಗೆ ಮಾನಸೀಕ, ಆರ್ಥಿಕ ಮತ್ತು ಒಳ್ಳೆಯ ಆರೋಗ್ಯದ ಬೆಂಬಲ ಬೇಕಾಗಿದೆ ಆದ್ದರಿಂದ ಶಾಲೆಗಳಲ್ಲಿ ಮಕ್ಕಳಿಗೆ ಹಿರಿಯರನ್ನು ಮತ್ತು ವೃದ್ದರನ್ನು ಮನೆಯಲ್ಲಿ ಗೌರವಿಸಿ ಆರೈಕೆ ಮಾಡುವುದನ್ನು ಭೋದಿಸಬೇಕೆಂದು ಮನವಿ ಮಾಡಿದ ಡಾ.ನಟರಾಜ್, ರಾಜ್ಯ ಸರ್ಕಾರ ಜಾರಿಗೆ ತಂದಿರುವ ಪುನೀತ್‌ರಾಜ್‌ಕುಮಾರ್ ಹೃದಯ ಭಾಗ್ಯ ಯೋಜನೆ ಬಗ್ಗೆ ಮಾಹಿತಿ ನೀಡಿದರು.
ಜಿಲ್ಲಾ ಸರ್ವೆಕ್ಷಣಾಧಿಕಾರಿ ಡಾ.ನಾಗರಾಜ್, ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಬಿ.ಜೆ.ನವೀನ್,
ವೈದ್ಯರಾದ ಡಾ.ಕಿಶೋರ್, ಡಾ.ಶಿವಮೂರ್ತಿ, ಡಾ.ಮಂಜುನಾಥ್, ಹಿರಿಯ ನಾಗರೀಕರಾದ ಸಣ್ಣಲಿಂಗಪ್ಪ,
ತಿಮ್ಮಶೆಟ್ಟಿ, ರಾಮಕೃಷ್ಣ, ವ್ಯಾನ್‌ಸುರೇಶ್, ಆರೋಗ್ಯ ಇಲಾಖೆಯ ಸಿಬ್ಬಂದಿಗಳಾದ ಕೆ.ವಿ.ರಮೇಶ್,
ಸಿ.ಎಂ.ರೇಖಾ, ಮಹೇಶ್ ಸೇರಿದಂತೆ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯರು ಇದ್ದರು.