ತುಮಕೂರು:ತುಮಕೂರು ಲೋಕಸಭಾ ಟಿಕೆಟ್ ಮೇಲೆ ಕಣ್ಣಿಟ್ಟಿರುವ ವಿ. ಸೋಮಣ್ಣ ಮೇಲಿಂದ ಮೇಲೆ ತುಮಕೂರು ಜಿಲ್ಲೆಗೆ ಭೇಟಿ ಕೊಡುತ್ತಿದ್ದು, ಇಂದು ತುಮಕೂರು ನಗರದ ಕೊಲ್ಲಾಪುರದಮ್ಮ ದೇವಸ್ಥಾನದ ಲಕ್ಷದೀಪೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ವಿ ಸೋಮಣ್ಣ ಅವರನ್ನು ಬರಮಾಡಿಕೊಂಡು ಜೆಡಿಎಸ್ನ ಉಪಮೇಯರ್ ನರಸಿಂಹಮೂರ್ತಿ ಹಾಗೂ ಜೆಡಿಎಸ್ ಪಾಲಿಕೆ ಸದಸ್ಯ ಶ್ರೀನಿವಾಸ್ ಸತ್ಕರಿಸಿದರು. ಬಳಿಕ ಮಾಧ್ಯಮದವರೊಂದಿಗೆ ವಿ.ಸೋಮಣ್ಣ ಮಾತನಾಡಿ ತುಮಕೂರಿಗೂ ನನಗೂ ಅವಿನಾಭಾವ ಸಂಬಂಧವಿದ್ದು, ವಿಧಿ ಲಿಖಿತ ಏನಿದಿಯೋ ಹಾಗಾಗುತ್ತೆ.
ದೆಹಲಿಯಿಂದ ನೆನ್ನೆ ನನಗೆ ಫೋನ್ ಬಂದಿತ್ತು. ಈಗ ಮೂರು ರಾಜ್ಯದ ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆ ಮುಗಿದಿದೆ. ನನ್ನನ್ನು ದೆಹಲಿಗೆ ಕರೆದಿದ್ದಾರೆ. ಒಂದು ಸತ್ಯ ದೇಶಕ್ಕೆ ಮೋದಿ ಬೇಕು. ನೆನ್ನೆ ನಾನು ಬಿಜಾಪುರದ ಸಿದ್ದನ ಕೊಳದ ಮಠಕ್ಕೆ ಭೇಟಿ ಕೊಟ್ಟೆ, ಅಲ್ಲಿ ಆ ತಪಸ್ವಿಗಳ ಜೀವಂತ ಸಮಾಧಿ ನೋಡಿ ನನಗೆ ಒಂದು ರೀತಿ ಅನುಭವವಾಯಿತು. ಯಾರು ನಡವಳಿಕೆಯಲ್ಲಿ ದೇವರನ್ನು ಕಾಣುತ್ತಾರೋ, ಕೆಲವು ಸಂದರ್ಭದಲ್ಲಿ ಆಗುವ ಅನಾಹುತಗಳು, ಸ್ವ ಪಕ್ಷಿಯರಿಂದ ಆದ ಕೆಟ್ಟ ಸಂದೇಶಗಳು ಜಾಸ್ತಿ ದಿನ ಉಳಿಯುವುದಿಲ್ಲ ಎಂಬುದು ಅನುಭವಕ್ಕೆ ಬಂತು. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ವರಿಷ್ಠರ ಜೊತೆ ಮಾತಾಡಿ ಅವರು ಏನು ಹೇಳ್ತಾರೋ ಹಾಗೆ ಮಾಡ್ತೀನಿ ಎಂದು ಹೇಳಿದರು.
ನಂತರ ಯತ್ನಾಳ್ – ಯಡಿಯೂರಪ್ಪ ವಿರುದ್ಧ ವಾಗ್ದಾಳಿ ವಿಚಾರವಾಗಿ ಪ್ರತಿಕ್ರಿಯಿಸಿ ಯತ್ನಾಳ್ ಒಬ್ಬರು ಸುಸಂಸ್ಕೃತ ರಾಜಕಾರಣಿ. ನನ್ನ ನೋವು ನನಗೆ ಗೊತ್ತು, ಅವರ ನೋವು ಅವರಿಗೆ ಗೊತ್ತು. ಒಂದೊಂದು ಸಾರಿ ನನಗೆ ದೊಡ್ಡ ನಾಯಕರುಗಳ ಸೂಚನೆಯೂ ಇರುವುದರಿಂದ ನಾನು ಹೆಚ್ಚಿಗೆ ಮಾತನಾಡುವುದಿಲ್ಲ. 40 ವರ್ಷ ನನ್ನ ರಾಜಕೀಯ ಅಧಿಕಾರ ಅವಧಿಯಲ್ಲಿ ನನ್ನ ವೈಯಕ್ತಿಕ ಬದುಕಿನಲ್ಲಿ ಯಾರೊಬ್ಬರೂ ಬೆಟ್ಟು ಮಾಡಿ ತೋರಿಸಿಲ್ಲ. ಹಿರಿಯರು ಅನ್ನೋದು ನಡವಳಿಕೆಯಲ್ಲಿ ಇರಬೇಕು ಎಂದು ಬಿಎಸ್ ವೈ ಗೆ ಪರೋಕ್ಷವಾಗಿ ಟಾಂಗ್ ಕೊಟ್ಟರು.
ನಿನ್ನೆ ಮಧ್ಯಾಹ್ನ ಬಿಜಾಪುರಕ್ಕೆ ಹೋಗಬೇಕಾದರೆ ದೆಹಲಿಯಿಂದ ಕರೆ ಬಂತು ದೆಹಲಿಗೆ ತುರ್ತಾಗಿ ಬರಲಿಕ್ಕೆ ಹೇಳಿದ್ದರು. ನಾನು ನಾಳೆ- ನಾಡಿದ್ದು ಬರಕಾಗಲ್ಲ ಅಂತ ಹೇಳಿದೆ. ಇನ್ನೆರಡು ಮೂರು ದಿನದಲ್ಲಿ ನನ್ನ ತಾಯಿ ಆರಾಧನೆ ಇದೆ. ಅದನ್ನು ಮುಗಿಸಿಕೊಂಡು ಹೋಗುತ್ತೇನೆ. ನಾನು ಎಳೆ ಮಗುವಲ್ಲ, ಆರೇಳು ಜನ ಸಿಎಂಗಳ ಜೊತೆ ಕೆಲಸ ಮಾಡಿದ್ದೇನೆ. ಇವತ್ತು ರಾತ್ರಿ ಮತ್ತೆ ದೆಹಲಿಗೆ ಫೋನ್ ಮಾಡಿ ಡೇಟ್ ತೆಗೆದುಕೊಳ್ಳುತ್ತೇನೆ ಅವರು ಬಾ ಅಂದಾಗ ಹೋಗುತ್ತೇನೆ ಎಂದು ತುಮಕೂರಿನಲ್ಲಿ ಮಾಜಿ ಸಚಿವ ವಿ ಸೋಮಣ್ಣ ಹೇಳಿದರು.