ಮಂಗಳೂರು (ದಕ್ಷಿಣ ಕನ್ನಡ) :ಪ್ರಪಂಚದಲ್ಲಿ ನಡೆದಿರುವ ದೊಡ್ಡ ಹಗರಣ ಚುನಾವಣಾ ಬಾಂಡ್ ಖರೀದಿ ಪ್ರಕರಣವಾಗಿದ್ದು, ಇದರಲ್ಲಿ ಭಾಗಿಯಾದವರು ದೇಶದ್ರೋಹಿಗಳೇ ಹೊರತು, ಇದನ್ನು ಪ್ರಶ್ನಿಸುವವರಲ್ಲ ಎಂದು ಬಹುಭಾಷಾ ನಟ ಪ್ರಕಾಶ್ ರಾಜ್ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗಾರರ ಜತೆ ಚುನಾವಣಾ ಬಾಂಡ್ ಕುರಿತಂತೆ ಪ್ರಧಾನಿ ಮೋದಿಯವರನ್ನು ಪ್ರಶ್ನಿಸಿರುವ ಪ್ರಕಾಶ್ ರಾಜ್, ‘ಮನ್ ಕಿ ಬಾತ್’ನಲ್ಲಿ ಈ ಬಗ್ಗೆಯೂ ಮಾತನಾಡಿ. ಈ ಚುನಾವಣಾ ಬಾಂಡ್ ಗಳನ್ನು ದೇಶ ಉದ್ಧಾರಕ್ಕಾಗಿ ತೆಗೆದುಕೊಂಡಿದ್ದಾ ? ತಿಳಿಸಿ ಎಂದು ಸವಾಲು ಹಾಕಿದರು.
ಇಲೆಕ್ಟೊರಲ್ ಬಾಂಡ್ ನಿಯಮ ತಂದು ಅದನ್ನು ಗೌಪ್ಯವಾಗಿರಿಸಿದ್ದು ಯಾಕೆ ಎಂದು ಪ್ರಶ್ನಿಸಿದ ಪ್ರಕಾಶ್ ರಾಜ್, ಪ್ರಧಾನ ಮಂತ್ರಿ ಹಾಗೂ ಗೃಹ ಸಚಿವರು ಸುಳ್ಳು ಹೇಳುತ್ತಿದ್ದಾರೆ. ಗೃಹ ಸಚಿವರೇ ಹೇಳುವಂತೆ ನಾವು 6,000 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್ ಪಡೆದುಕೊಂಡಿದ್ದೇವೆ. ನಮ್ಮಲ್ಲಿ 330 ಸಂಸದರಿದ್ದಾರೆ. ಅದನ್ನು ಹಂಚಿಕೊಂಡರೆ ಕಡಿಮೆ ಆಗುತ್ತೆ ಅಂದಿದ್ದಾರೆ. ಇದು ಬ್ಯಾಂಕ್ ಲೂಟಿ ಮಾಡಿದ ಹಾಗೆ, ಇದು ಭ್ರಷ್ಟಾಚಾರ ಅಲ್ಲವೇ ಎಂದು ಅವರು ಪ್ರಶ್ನಿಸಿದರು.