ಶಿವಮೊಗ್ಗ: ಭಾರತ ಚುನಾವಣಾ ಆಯೋಗದ ಅಧಿಕಾರಿಗಳು ಮತಗಟ್ಟೆ ಹಾಗೂ ಸಮಗ್ರ ಚುನಾವಣಾ ಪ್ರಕ್ರಿಯೆ ಪರಿಶೀಲನೆಯ ಭಾಗವಾಗಿ ಶಿವಮೊಗ್ಗ ಜಿಲ್ಲೆಗೆ ಭೇಟಿ ನೀಡಿದರು.
ಮಹಾನಗರಪಾಲಿಕೆ ಕಚೇರಿಯಲ್ಲಿ ಮತಗಟ್ಟೆ ಅಧಿಕಾರಿಗಳಿಗೆ (ಬಿಎಲ್‌ಓ) ಆಯೋಜಿಸಲಾಗಿದ್ದ ತರಬೇತಿ ಕಾರ್ಯಕ್ರಮದಲ್ಲಿ ತಂಡವು ಪಾಲ್ಗೊಂಡು ಮತಗಟ್ಟೆ ಅಧಿಕಾರಿಗಳ ಮೂಲ ಕರ್ತವ್ಯಗಳು ಮತ್ತು ಜವಾಬ್ದಾರಿಗಳ ಕುರಿತು ವಿಶ್ಲೇಷಿಸಿತು. ನಂತರ ಮತಗಟ್ಟೆ ಅಧಿಕಾರಿಗಳೊಂದಿಗೆ ಸಂವಾದಿಸಲಾಯಿತು.
ತರಬೇತಿ ನಂತರ ತಂಡವು ಮತಗಟ್ಟೆಗಳ ಪರಿಶೀಲನೆ ನಡೆಸಿತು. 111-ಶಿವಮೊಗ್ಗ ಗ್ರಾಮಾಂತರ ಹಾಗೂ 117-ಸಾಗರ ವಿಧಾನಸಭಾ ಕ್ಷೇತ್ರಗಳ ಆಯ್ದ ಮತಗಟ್ಟೆಗಳಿಗೆ ಭೇಟಿ ನೀಡಿ, ಮತಗಟ್ಟೆಗಳಲ್ಲಿ ಖಚಿತ ಕನಿಷ್ಟ ಸೌಲಭ್ಯಗಳು ಇವೆಯೇ ಎಂಬುದನ್ನು ಪರಿಶೀಲಿಸಲಾಯಿತು. ಹಿಂದಿನ ಸಂಸತ್ ಹಾಗೂ ವಿಧಾನಸಭಾ ಚುನಾವಣೆಯ ಮತದಾನದ ಶೇಕಡಾವಾರು ಅಂಕಿಅAಶಗಳ ಮಾಹಿತಿ ಪಡೆದು, ಪ್ರಸ್ತುತ ಸಾಲಿನ ಮತದಾರರ ಪಟ್ಟಿಗೆ ಮತದಾರರ ಸೇರ್ಪಡೆ, ಕೈಬಿಡಲಾಗಿರುವ ಮತ್ತು ತಿದ್ದುಪಡಿ ಮಾಡಿರುವ ಮತದಾರರ ಸಂಖ್ಯೆಯನ್ನು ಸಂಗ್ರಹಿಸಿತು.
ಚುನಾವಣಾ ಮೂಲಭೂತ ಸಿದ್ದತೆಯನ್ನು ಬಲಪಡಿಸುವುದು, ದೋಷರಹಿತ ಮತದಾರರ ಪಟ್ಟಿಯನ್ನು ಖಚಿತಪಡಿಸುವುದು, ಮತದಾರರಿಗೆ ಹೆಚ್ಚಿನ ಸೌಲಭ್ಯ ಒದಗಿಸುವುದು ಹಾಗೂ ಜಿಲ್ಲೆಯಾದ್ಯಂತ ಚುನಾವಣೆಗಳು ಸುಗಮವಾಗಿ ನಡೆಯುವಂತೆ ಖಾತ್ರಿಪಡಿಸುವ ಉದ್ದೇಶದಿಂದ ಜಿಲ್ಲೆಗೆ ಭೇಟಿ ನೀಡಲಾಗಿದೆ ಎಂದು ತಿಳಿಸಿದೆ.