ಚಿತ್ರದುರ್ಗ: ಜಿಲ್ಲೆಯಲ್ಲಿ ಜರುಗುತ್ತಿರುವ ಮತದಾರರ ಪಟ್ಟಿ ಸಂಕ್ಷಿಪ್ತ ಪರಿಷ್ಕರಣೆ ಕಾರ್ಯಕ್ರಮದ ಬಗ್ಗೆ ಚುನಾವಣಾ ಆಯೋಗದ ಸೂಚನೆಯಂತೆ ಸೂಪರ್ ಚೆಕ್ ನಡೆಸುವ ಕಾರ್ಯಕ್ರಮದಡಿ ಚಿತ್ರದುರ್ಗ ಜಿಲ್ಲಾ ಮತದಾರರ ಪಟ್ಟಿ ವೀಕ್ಷಕರು ಹಾಗೂ ತೋಟಗಾರಿಕೆ ಮತ್ತು ಇಲಾಖೆ ಸರ್ಕಾರದ ಕಾರ್ಯದರ್ಶಿ ಡಾ.ಶಮ್ಲಾ ಇಕ್ಬಾಲ್ ಬುಧವಾರ ನಗರದ ವಿವಿಧ ಮತಗಟ್ಟೆಗಳಿಗೆ ತೆರಳಿ ವೀಕ್ಷಣೆ ನಡೆಸಿದರು.
ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗದ ನಿರ್ದೇಶನದನ್ವಯ ಜಿಲ್ಲೆಯ ಮತದಾರರ ಪಟ್ಟಿ ವೀಕ್ಷಕರಾದ ಡಾ. ಶಮ್ಲಾ ಇಕ್ಬಾಲ್ ಅವರು ಜಿಲ್ಲೆಗೆ ಭೇಟಿ ನೀಡಿ ಎರಡನೆ ಹಂತದ ಪರಿಶೀಲನೆ ಕಾರ್ಯ ಕೈಗೊಂಡರು. ಇದರ ಅಂಗವಾಗಿ, ನಗರದ ಸರಸ್ವತಿ ಕಾನೂನು ಕಾಲೇಜು, ಜೆ.ಜೆ.ಹಟ್ಟಿ, ರೈಲ್ವೇ ನಿಲ್ದಾಣ ಬಳಿಯ ಸದಾನಂದಯ್ಯ ಬಡಾವಣೆ, ನೀಲಕಂಠೇಶ್ವರ ಬಡಾವಣೆ ಹಾಗೂ ಮಲ್ಲಾಪುರ ಸರ್ಕಾರಿ ಪ್ರಾಥಮಿಕ ಪಾಠ ಶಾಲೆಯ ಮತಗಟ್ಟೆಗಳಿಗೆ ಖುದ್ದು ಭೇಟಿ ನೀಡಿದ ಅವರು, ಮತದಾರರ ಪಟ್ಟಿಗೆ ಹೊಸದಾಗಿ ಹೆಸರು ಸೇರ್ಪಡೆ, ತಿದ್ದುಪಡಿ ಹಾಗೂ ಸ್ಥಳಾಂತರ, ನಿಷ್ಕ್ರಮಣೆ (ಡಿಲೀಟ್) ಕುರಿತು ಮತಗಟ್ಟೆ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಮತಗಟ್ಟೆ ಅಧಿಕಾರಿಗಳು ತಪ್ಪದೇ ನೊಂದಣಿ ವಹಿ ನಿರ್ವಹಿಸಬೇಕು. ಪ್ರತಿ ಮನೆ ಮನೆಗೂ ತೆರಳಿ 18 ವರ್ಷ ತುಂಬಿದ ಎಲ್ಲರನ್ನೂ ಮತದಾರರ ಪಟ್ಟಿಗೆ ಸೇರ್ಪಡೆಗೊಳ್ಳುವಂತೆ ಪ್ರೇರೇಪಿಸಬೇಕು. ಮಹಿಳಾ ಮತದಾರರ ನೊಂದಣಿ ಕೈತಪ್ಪಿ ಹೋಗದಂತೆ ಜಾಗೃತಿ ವಹಿಸಬೇಕು ಎಂದು ಮತದಾರರ ಪಟ್ಟಿ ವೀಕ್ಷಕರಾದ ಡಾ.ಶಮ್ಲಾ ಇಕ್ಬಾಲ್ ಮತಗಟ್ಟೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಇದಕ್ಕೂ ಮುನ್ನಾ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳ ಮತದಾರ ಪಟ್ಟಿಯಲ್ಲಿನ ಹೆಸರು ಸೇರ್ಪಡೆ ಹಾಗೂ ಬದಲಾವಣೆಗಾಗಿ ಅರ್ಜಿ ಸಲ್ಲಿಸಿದ ಫಾರಂ-6 ಹಾಗೂ 7 ಅರ್ಜಿಗಳ ಮೇಲ್ವಿಚಾರಣೆ ನಡೆಸಿದರು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಉಪವಿಭಾಗಾಧಿಕಾರಿ ಎಂ.ಕಾರ್ತಿಕ್, ಚಿತ್ರದುರ್ಗ ತಹಶೀಲ್ದಾರ್ ನಾಗವೇಣಿ, ನಗರಸಭೆ ಆಯುಕ್ತೆ ರೇಣುಕಾ, ಹೊಳಲ್ಕೆರೆ ತಹಶೀಲ್ದಾರ್ ಬೇಬಿ ಫಾತೀಮಾ, ಹಿರಿಯೂರು ತಹಶೀಲ್ದಾರ್ ರಾಜೇಶ್, ಚುನಾವಣೆ ಶಾಖೆ ತಹಶೀಲ್ದಾರ್ ಸಂತೋಷ ಕುಮಾರ್ ಸೇರಿದಂತೆ ಕಂದಾಯ ಇಲಾಖೆ ಸಿಬ್ಬಂದಿ ಇದ್ದರು