ತಿರುವನಂತಪುರಂ: ಕೇರಳದ ಕೊಯಿಲಾಂಡಿ ಬಳಿಯ ಮನಕುಲಂಗರ ದೇವಸ್ಥಾನದಲ್ಲಿ ಆನೆ ದಾಳಿಯಿಂದ ಉಂಟಾದ ಕಾಲ್ತುಳಿತಕ್ಕೆ 3 ವೃದ್ಧರು ಬಲಿಯಾಗಿದ್ದಾರೆ.
ಗುರುವಾರ ಸಂಜೆ ನಡೆದ ದೇವಾಲಯದ ಉತ್ಸವಕ್ಕಾಗಿ ಆನೆಗಳನ್ನು ತರಲಾಗಿತ್ತು. ಈ ಸಂದರ್ಭದಲ್ಲಿ ಪಟಾಕಿ ಸಿಡಿಸಿದಾಗ ಎರಡು ಆನೆಗಳು ಆತಂಕಕ್ಕೊಳಗಾಗಿ ಅಡ್ಡದಿಡ್ಡಿ ಚಲಿಸಿವೆ. ಇದರ ಪರಿಣಾಮದಿಂದ ಉಂಟಾದ ಕಾಲ್ತುಳಿತದಲ್ಲಿ ಮೂವರು ವೃದ್ಧರು ಸಾವನ್ನಪ್ಪಿದ್ದಾರೆ.
ಆನೆಗಳು ದೇವಾಲಯದ ಕಟ್ಟಡಕ್ಕೆ ಡಿಕ್ಕಿ ಹೊಡೆದಾಗ, ಅದರ ಗೋಡೆಯ ಒಂದು ಭಾಗ ಕುಸಿದು ಬಿದ್ದಿದೆ. ಕೆಲವರು ಅದರ ಕೆಳಗೆ ಸಿಲುಕಿಕೊಂಡರು.
ಇದುವರೆಗೆ ಬಂದಿರುವ ಮಾಹಿತಿಯ ಪ್ರಕಾರ, ಗೋಡೆ ಕುಸಿದು ಇಬ್ಬರು ಮಹಿಳೆಯರು ಮತ್ತು ಒಬ್ಬ ಪುರುಷ ಸಾವನ್ನಪ್ಪಿದ್ದಾರೆ. ಸುಮಾರು 20 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಮೃತರಿಗೆ ಸಂತಾಪ ಸೂಚಿಸಿದ್ದಾರೆ.