ತಿರುವನಂತಪುರಂ : ದೇವಾಲಯದ ಆವರಣದಲ್ಲಿ ಉತ್ಸವದ ಆನೆಯೊಂದು ಅರ್ಚಕನನ್ನು ತನ್ನ ಸೊಂಡಿಲಿನಿಂದ ಎತ್ತಿ ಎಸೆದ ಪರಿಣಾಮ ಅರ್ಚಕ ಗಂಭೀರ ಗಾಯಗೊಂಡಿರುವ ಘಟನೆ ಕೇರಳದ ತ್ರಿಶೂರ್ನಲ್ಲಿ ನಡೆದಿದೆ.

ಅನ್ನಮನದ ಮಹಾದೇವ ದೇವಾಲಯದಲ್ಲಿ ಮೆರವಣಿಗೆಯ ಸಮಯದಲ್ಲಿ ಈ ಘಟನೆ ಸಂಭವಿಸಿದೆ. ಆನೆಯನ್ನು ಅಲಂಕರಿಸಿ ದೇವಾಲಯದ ಆವರಣಕ್ಕೆ ಧಾರ್ಮಿಕ ಮೆರವಣಿಗೆಗಾಗಿ ತರಲಾಯಿತು. ದೇವರ ವಿಗ್ರಹವನ್ನು ಆನೆಯ ಮೇಲೆ ಇರಿಸಲು ಸಿದ್ಧತೆಗಳು ನಡೆಯುತ್ತಿದ್ದಾಗ, ಮಾವುತ ಅರ್ಚಕರೊಬ್ಬರು ಆನೆಯ ಮೇಲೆ ಹತ್ತಲು ಸಹಾಯ ಮಾಡುತ್ತಿದ್ದರು. ಈ ವೇಳೆ ಉದ್ರೇಕಗೊಂಡ ಆನೆ ಹತ್ತಿರದಲ್ಲಿ ನಿಂತಿದ್ದ ಮತ್ತೊಬ್ಬ ಅರ್ಚಕನನ್ನು ಏಕಾಏಕಿ ಸೊಂಡಿಲಿನಿಂದ ಎತ್ತಿ ಪಕ್ಕಕ್ಕೆ ಎಸೆದಿದೆ.
ಘಟನೆ ನಡೆದ ತಕ್ಷಣವೇ ಮಾವುತ ಆನೆಯ ಮೇಲೆ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆಯಲ್ಲಿ ಗಂಭೀರ ಗಾಯಗೊಂಡ ಅರ್ಚಕನನ್ನು ತಕ್ಷಣವೇ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗುತ್ತಿದೆ.



