Thursday, April 3, 2025
Google search engine

Homeಕಾಡು-ಮೇಡುಮೇ 23 ರಿಂದ ರಾಜ್ಯದ ಗಡಿ ಪ್ರದೇಶಗಳಲ್ಲಿ ಆನೆ ಗಣತಿ ಆರಂಭ

ಮೇ 23 ರಿಂದ ರಾಜ್ಯದ ಗಡಿ ಪ್ರದೇಶಗಳಲ್ಲಿ ಆನೆ ಗಣತಿ ಆರಂಭ

ಮೈಸೂರು: ಕರ್ನಾಟಕ, ಕೇರಳ ಮತ್ತು ತಮಿಳುನಾಡು ಗಡಿ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಮಾನವ-ಆನೆ ಸಂಘರ್ಷಕ್ಕೆ ಪ್ರತಿಕ್ರಿಯೆಯಾಗಿ, ಅಂತರರಾಜ್ಯ ಸಮನ್ವಯ ಸಮಿತಿಯು ಮೇ 23 ರಿಂದ 25 ರವರೆಗೆ ಸಿಂಕ್ರೊನೈಸ್ಡ್ ಆನೆಗಳ ಗಣತಿ ನಡೆಸಲಿದೆ. ಮಾನವ- ಆನೆ ಸಂಘರ್ಷ ತಪ್ಪಿಸುವುದು ಮತ್ತು ನಿರ್ವಹಣಾ ತಂತ್ರಗಳ ಅಭಿವೃದ್ಧಿ ಈ ಪ್ರಯತ್ನದ ಪ್ರಮುಖ ಉದ್ದೇಶವಾಗಿದೆ.

ಈ ಕುರಿತು ಮಾತನಾಡಿದ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ಹರ್ಷಕುಮಾರ ಚಿಕ್ಕನರಗುಂದ ಗಣತಿ ಮೂರು ಹಂತಗಳಲ್ಲಿ ನಡೆಯುತ್ತದೆ. ಮೇ 23 ರಂದು ಬ್ಲಾಕ್ ಸ್ಯಾಂಪಲಿಂಗ್ ನಡೆಯಲಿದೆ. ಐದು ಚದರ ಕಿ.ಮೀ ಮಾದರಿಯ ಬ್ಲಾಕ್‌ಗಳನ್ನು ರಚಿಸಲಾಗುವುದು. ಮೂರು ಸಿಬ್ಬಂದಿಯ ತಂಡಗಳು ಕನಿಷ್ಠ 15-ಕಿಮೀ ಕಾಲ್ನಡಿಗೆಯಲ್ಲಿ ಗಸ್ತು ತಿರುಗುವ ಮೂಲಕ ಆನೆ ಗುಂಪಿನ ಗಾತ್ರ, ಲಿಂಗ, ವಯಸ್ಸು ಮತ್ತಿತರ ಮಾಹಿತಿಗಳನ್ನು ನೇರವಾಗಿ ಸಂಗ್ರಹಿಸುತ್ತವೆ.

ಮೇ 24 ರಂದು ಎರಡನೇ ದಿನ, ಲೈನ್ ಟ್ರಾನ್ಸೆಕ್ಟ್ ಚಟುವಟಿಕೆ ನಡೆಯಲಿದೆ. ಬೆಳಗ್ಗೆ 6 ಗಂಟೆಗೆ 2 ಕಿ.ಮೀ ನಡಿಗೆಯ ಸಮಯದಲ್ಲಿ, ಆನೆಗಳ ಸಗಣಿ ಮತ್ತು ಹೆಜ್ಜೆಗುರುತುಗಳನ್ನು ಎರಡೂ ಬದಿಗಳಲ್ಲಿ ದಾಖಲಿಸಲಾಗುತ್ತದೆ. ಕೊನೆಯ ದಿನವಾದ ಮೇ 25 ರಂದು ನೀರಿನ ಹೊಂಡ ಎಣಿಕೆ ನಡೆಯಲಿದೆ. ಸಿಬ್ಬಂದಿ ಆಯ್ದ ಕೆರೆಗಳ ಮೇಲೆ ಬೆಳಗ್ಗೆ 6ರಿಂದ ಸಂಜೆ 6ರವರೆಗೆ ನಿಗಾ ಇಡುತ್ತಾರೆ, ಈ ಜಲಮೂಲಗಳಿಗೆ ಭೇಟಿ ನೀಡುವ ಆನೆಗಳ ರೆಕಾರ್ಡಿಂಗ್ ಮತ್ತು ಛಾಯಾಚಿತ್ರ ತೆಗೆಯುತ್ತಾರೆ.

ಮೈಸೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ವ್ಯಾಪಿಸಿರುವ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶವು ರಾಜ್ಯದ ಅತಿ ಹೆಚ್ಚು ಆನೆಗಳಿಂದ ಸಮೃದ್ಧವಾಗಿರುವ ಪ್ರದೇಶವಾಗಿದ್ದು, ಮಾಹಿತಿ ಸಂಗ್ರಹಿಸಲು ಈಗಾಗಲೇ 15 ದಿನಗಳ ಕ್ಯಾಮೆರಾ ಟ್ರ್ಯಾಪಿಂಗ್ ನಡೆಸಲಾಗಿದೆ. ಮೀಸಲು ಪ್ರದೇಶದಲ್ಲಿನ 91 ಗಸ್ತುಗಳಿಂದ 300 ಕ್ಕೂ ಹೆಚ್ಚು ಸಿಬ್ಬಂದಿ ಗಣತಿಯಲ್ಲಿ ಭಾಗವಹಿಸುತ್ತಾರೆ, ಪ್ರತಿ ಗಸ್ತುನಲ್ಲಿ ಕನಿಷ್ಠ ಒಬ್ಬ ತರಬೇತಿ ಪಡೆದ ಸಿಬ್ಬಂದಿ ಇರುತ್ತಾರೆ. ಈ ಪ್ರಯತ್ನವು ಆನೆಗಳ ಲಿಂಗ ಅನುಪಾತವನ್ನು ನಿರ್ಧರಿಸಲು ಮತ್ತು ಹೆಚ್ಚಿನ ಸಾಂದ್ರತೆಯ ಪ್ರದೇಶಗಳನ್ನು ಗುರುತಿಸಲು ಸಹಾಯ ಮಾಡುತ್ತದೆ, ಇದು ಮಾನವ-ಆನೆ ಸಂಘರ್ಷಗಳನ್ನು ತಡೆಗಟ್ಟಲು ಮತ್ತು ಪರಿಣಾಮಕಾರಿ ನಿರ್ವಹಣಾ ತಂತ್ರಗಳನ್ನು ಅಭಿವೃದ್ಧಿಪಡಿಸಲು ನಿರ್ಣಾಯಕವಾಗಿದೆ ಎಂದು ಅವರು ಹೇಳಿದರು.

ಕರ್ನಾಟಕದಲ್ಲಿ 10 ಅರಣ್ಯ ವಿಭಾಗಗಳಲ್ಲಿ ಗಣತಿ: ಕೇರಳ, ತಮಿಳುನಾಡು ಮತ್ತು ಆಂಧ್ರಪ್ರದೇಶದ ಅಂತರರಾಜ್ಯ ಗಡಿಯಲ್ಲಿರುವ ಕರ್ನಾಟಕದ 10 ಅರಣ್ಯ ವಿಭಾಗಗಳಲ್ಲಿ ಈ ಗಣತಿ ಕಾರ್ಯ ನಡೆಸಲಾಗುವುದು. ಕೋಲಾರ, ಕಾವೇರಿ ವನ್ಯಜೀವಿ, ಎಂಎಂ ಹಿಲ್ಸ್ ವನ್ಯಜೀವಿ, ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ, ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ, ಮಡಿಕೇರಿ ಟೆರಿಟೋರಿಯಲ್, ಮಡಿಕೇರಿ ವನ್ಯಜೀವಿ ಮತ್ತು ವಿರಾಜಪೇಟೆ ವಿಭಾಗಗಳಲ್ಲಿ ಗಣತಿ ಕಾರ್ಯ ನಡೆಯಲಿದೆ. ಇದರಲ್ಲಿ 65 ಅರಣ್ಯ ಶ್ರೇಣಿಗಳು ಮತ್ತು 563 ಬೀಟ್‌ಗಳು ಸೇರಿವೆ.

RELATED ARTICLES
- Advertisment -
Google search engine

Most Popular