ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಭಾರತವನ್ನು ಜಗತ್ತಿನಲ್ಲಿ ಅತಿ ಹೆಚ್ಚು ಹಾಲು ಉತ್ಪಾದಿಸುವ ದೇಶವನ್ನಾಗಿಸಿದ್ದು ಡಾ.ವರ್ಗೀಸ್ ಕುರಿಯನ್ ರವರು ಎಂದು ಮುಡಾ ಮಾಜಿ ಅಧ್ಯಕ್ಷ ಹೆಚ್.ಎನ್.ವಿಜಯ್ ಹೇಳಿದರು.
ಅವರು ತಾಲೂಕಿನ ಅಂಕನಹಳ್ಳಿ ಗ್ರಾಮದ ಶ್ರೀ ಅಂಕನಾಥೇಶ್ವರ ಸಮುದಾಯ ಭವನದಲ್ಲಿ ಮೈಸೂರು ಜಿಲ್ಲಾ ಹಾಲು ಒಕ್ಕೂಟದ ವತಿಯಿಂದ ಆಯೋಜಿಸಿದ್ದ ಕ್ಷೀರ ಪಿತಾಮಹ ಡಾ.ವರ್ಗೀಸ್ ಕುರಿಯನ್ ರವರ 13ನೇ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಹೈನುಗಾರಿಕೆ ಮೂಲಕ ರೈತರು ಇವತ್ತು ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಹಾಲಿನ ಡೇರಿಗಳಿವೆ, ಹಾಲು ಉತ್ಪಾದಕರ ಒಕ್ಕೂಟಗಳಿವೆ, ಹೈನುಗಾರಿಕೆ ಕ್ಷೇತ್ರದಲ್ಲಿ ಕೋಟ್ಯಂತರ ರೂಪಾಯಿಗಳ ವ್ಯವಹಾರ ನಡೆಯುತ್ತಿದೆ ಎಂದರೆ ಅದಕ್ಕೆ ಪ್ರಮುಖ ಕಾರಣಕರ್ತರು
ಡಾ.ವರ್ಗೀಸ್ ಕುರಿಯನ್ ರವರು ಎಂದರು.
ಮೈಮುಲ್ ಅಧ್ಯಕ್ಷ ಚಲುವರಾಜ್ ಮಾತನಾಡಿ ಭಾರತದ ಶ್ವೇತ ಕ್ರಾಂತಿಯ ಪಿತಾಮಹ ಡಾ.ವರ್ಗೀಸ್ ಕುರಿಯನ್ ರವರ ಜನ್ಮದಿನವನ್ನು ರಾಷ್ಟ್ರೀಯ ಹಾಲು ದಿನವನ್ನಾಗಿ ಆಚರಣೆ ಮಾಡಲಾಗುತ್ತಿದೆ ಎಂದರು.
ಮೈಸೂರು ಹಾಲು ಒಕ್ಕೂಟದಲ್ಲಿ ಅಧ್ಯಕ್ಷರಾಗಿ ಹಾಗೂ ನಿರ್ದೇಶಕರಾಗಿ ಎ.ಟಿ.ಸೋಮಶೇಖರ್ ಅವರು ಹಲವು ಪ್ರಮುಖ ಕಾರ್ಯಕ್ರಮಗಳನ್ನು ತರುವಲ್ಲಿ ಶ್ರಮಿಸಿದ್ದಾರೆ. ಇಂತಹ ಸರಳ ಸಜ್ಜನಿಕೆಯ ಸದಾ ಜನಪರ ಚಿಂತನೆಯನ್ನು ಮಾಡುವ ಎ.ಟಿ.ಸೋಮಶೇಖರ್ ಅವರ ಜನ್ಮದಿನವು ಇಂತಹ ಪುಣ್ಯದ ದಿನ ಬಂದಿರುವುದು ಅವರ ಸೇವಾ ಕಾರ್ಯಕ್ಕೆ ಮತ್ತಷ್ಟು ಪ್ರೋತ್ಸಾಹ ನೀಡಿದಂತಾಗುತ್ತದೆ. ಅವರು ಕೈಗೊಳ್ಳುವ ಜನಪರ ಕಾರ್ಯಕ್ರಮಗಳಿಗೆ ಸದಾ ನಮ್ಮೆಲ್ಲರ ಸಹಕಾರವಿರುತ್ತದೆ ಎಂದರು.
ಈ ಸಂದರ್ಭದಲ್ಲಿ ಡಾ.ವರ್ಗೀಸ್ ಕುರಿಯನ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಗೌರವ ನಮನವನ್ನು ಸಲ್ಲಿಸಲಾಯಿತು. ನಂತರ ಸಾರ್ವಜನಿಕರಿಗೆ ಅನ್ನ ಸಂತರ್ಪಣ ಕಾರ್ಯವನ್ನು ಮಾಡಲಾಯಿತು.
ವಿವಿಧ ವಿಷಯಗಳ ಕುರಿತಾಗಿ ಹಲವು ತಜ್ಞರುಗಳಿಂದ ಉಪನ್ಯಾಸವನ್ನು ನೀಡಲಾಯಿತು.
ಹಾಗೂ ತಾಲೂಕಿನ ವಿವಿಧ ಹಾಲು ಉತ್ಪಾದಕರ ಸಹಕಾರ ಸಂಘಗಳ ನಿವೃತ್ತ ನೌಕರರುಗಳನ್ನು ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಮೈಮುಲ್ ಮಾಜಿ ಅಧ್ಯಕ್ಷರು ಹಾಗೂ ಹಾಲಿ ನಿರ್ದೇಶಕರಾದ ಎ.ಟಿ.ಸೋಮಶೇಖರ್ ಅವರಿಗೆ ಅವರ ಜನ್ಮದಿನದ ಅಂಗವಾಗಿ ವಿವಿಧ ಭಾಗಗಳಿಂದ ಆಗಮಿಸಿದ್ದ ಜನಪ್ರತಿನಿಧಿಗಳು, ವಿವಿಧ ರಾಜಕೀಯ ಪಕ್ಷಗಳ ಮುಖಂಡರುಗಳು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಗಣ್ಯರುಗಳು ಸೇರಿದಂತೆ ಸಾರ್ವಜನಿಕರು, ತಾಲೂಕಿನ ಹಾಲಿನ ಡೇರಿಗಳ ವತಿಯಿಂದ ಶಾಲು ಹೊದಿಸಿ, ಬೃಹತ್ ಗಾತ್ರದ ಹಾರಗಳನ್ನು ಹಾಕಿ, ಮೈಸೂರು ಪೇಟ ತೊಡಿಸಿ ಸನ್ಮಾನಿಸಿ ಹುಟ್ಟು ಹಬ್ಬದ ಶುಭಾಶಯಗಳು ಕೋರಿದರು.
ಮೈಮುಲ್ ನಿರ್ದೇಶಕ ಎ.ಟಿ.ಸೋಮಶೇಖರ್ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿ ಡಾ.ವರ್ಗೀಸ್ ಕುರಿಯನ್ ರವರ ಪುಣ್ಯ ಸ್ಮರಣೆಯ ದಿನದಂದು ನನ್ನ ಜನ್ಮದಿನವು ಬಂದಿರುವುದು ಅದು ನನ್ನ ಪುಣ್ಯವಾಗಿದೆ. ಅವರ ಹಾದಿಯಲ್ಲಿ ನಡೆಯುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುವ ಮೂಲಕ ಸರ್ವರಿಗೂ ನಮ್ಮ ಕೈಲಾದ ಒಳಿತನ್ನು ಮಾಡುವ ಕೆಲಸವನ್ನು ಸರ್ವರು ಮಾಡೋಣ ಎಂದ ಅವರು ನನ್ನ ಜನ್ಮ ದಿನಕ್ಕೆ ಶುಭ ಕೋರಿದ ಸರ್ವರಿಗೂ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ಮೈಮುಲ್ ನಿರ್ದೇಶಕರುಗಳಾದ ಈರೇಗೌಡ, ಉಮಾಶಂಕರ್, ಗುರುಸ್ವಾಮಿ, ಮಾಜಿ ನಿರ್ದೇಶಕಿ ವಿಜಯಲಕ್ಷ್ಮಿ, ಉಪ ವ್ಯವಸ್ಥಾಪಕ ಕರಿಬಸವರಾಜು, ಎಪಿಎಂಸಿ ಮಾಜಿ ಅಧ್ಯಕ್ಷ ಕುಪ್ಪಹಳ್ಳಿ ಸೋಮಶೇಖರ್, ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಟಿ.ರಾಮೇಗೌಡ, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಶಿವರಾಂ, ಉಪಾಧ್ಯಕ್ಷ ಹೊಸೂರು.ಎ ಕುಚೆಲ, ನಿರ್ದೇಶಕರಾದ ಎಸ್.ಆರ್.ಪ್ರಕಾಶ್, ಸುನೀತಾರಮೇಶ್, ತಾಲೂಕು ಹಾಲಿನ ಡೇರಿಗಳ ನೌಕರರ ಸಂಘದ ಅಧ್ಯಕ್ಷ ಜಿ.ಕೆ.ಮಹದೇವ್, ಉಪಾಧ್ಯಕ್ಷ ದಿನೇಶ್, ಮುಖಂಡರುಗಳಾದ ಡಾ.ಸಣ್ಣತಮ್ಮೇಗೌಡ, ತಮ್ಮಣ್ಣ, ಚಂದ್ರೆಗೌಡ, ಮಿರ್ಲೆ ರಾಜೀವ್, ಎ.ಟಿ.ಸತೀಶ್, ರಂಗಪ್ಪ, ಕೆ.ಎಲ್.ರಮೇಶ್, ಮಂಜುಗೌಡ, ಸಾ.ರಾ.ಸತೀಶ್, ಶಕೀಲ್, ಮೂರ್ತಿ, ಕರೀಗೌಡ, ಎಲ್.ಎಂ.ಮಂಜುನಾಥ್, ಗಂಗಾಧರ್, ಮೃತ್ಯುಂಜಯ, ತಾಲೂಕಿನ ಹಾಲಿನ ಡೇರಿಗಳ ಆಡಳಿತ ಮಂಡಳಿಯವರು ಹಾಗೂ ನೌಕರರುಗಳು ಸೇರಿದಂತೆ ಹಲವರು ಪಾಲ್ಗೊಂಡಿದ್ದರು.