ಮಂಡ್ಯ: ನಾಡಪ್ರಭು ಕೆಂಪೇಗೌಡರು ದಕ್ಷ ಆಡಳಿತಗಾರರಾಗಿ ಬೆಂಗಳೂರು ಅಭಿವೃದ್ಧಿಗೆ ಅಡಿಪಾಯ ಹಾಕಿಕೊಟ್ಟರು ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ಅವರು ತಿಳಿಸಿದರು.
ನಾಗಮಂಗಲ ತಾಲ್ಲೂಕು ಆಡಳಿತ, ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣಾ ಸಮಿತಿ ಹಾಗೂ ತಾಲ್ಲೂಕು ಒಕ್ಕಲಿಗರ ಸಂಘ ಮತ್ತು ಟೌನ್ ಒಕ್ಕಲಿಗರ ಸಂಘದ ಆಶ್ರಯದಲ್ಲಿ ನಾಗಮಂಗಲದಲ್ಲಿಂದು ನಾಡಪ್ರಭು ಕೇಂಪೆಗೌಡರ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೆಂಪೇಗೌಡರು ಬೆಂಗಳೂರಿನ ಅಭಿವೃದ್ಧಿಗೆ ಶ್ರಮಿಸಿದರು. ಕುವೆಂಪು ಹಾಗೂ ಕೆಂಪೇಗೌಡರು ಈ ನಾಡಿನ ಎರಡು ಕಣ್ಣುಗಳು ಇದ್ದಾಗೆ. ಅವರ ದೂರದೃಷ್ಟಿಯಿಂದ ನಾವು ಇಂದು ಸಹಬಾಳ್ವೆಯಿಂದ ಜೀವನ ನಡೆಸುತ್ತಿದ್ದೇವೆ ಎಂದರು.
ಕೆಂಪೇಗೌಡರರು ಕೇವಲ ಒಂದು ವರ್ಗಕ್ಕೆ ಸೀಮಿತವಾದವರಲ್ಲ. ಸಮಾಜದ ಎಲ್ಲಾ ವರ್ಗದ ಜನರ ಅಭಿವೃದ್ಧಿಗೆ ದುಡಿದಿದ್ದಾರೆ ಎಂದರು.
ಬೆಂಗಳೂರಿಗೂ ನಾಗಮಂಗಲಕ್ಕೂ ತುಂಬಾ ಹತ್ತಿರದ ನಂಟು. ನಾಗಮಂಗಲದ ಜನತೆ ಬೆಂಗಳೂರಿಗೆ ಹೋಗಿ ಉದ್ಯೋಗ ಗಿಟ್ಟಿಸಿಕೊಳ್ಳಲು ಕೆಂಪೇಗೌಡರು ಕಾರಣ ಎಂದರು.
ಕರ್ನಾಟಕ ಸಂಘದ ಅಧ್ಯಕ್ಷರು ಹಾಗೂ ಸಾಹಿತಿಗಳಾದ ಪ್ರೊ.ಜಯಪ್ರಕಾಶ್ ಗೌಡ ಅವರು ಮಾತನಾಡಿ ನಾಗಮಂಗಲದ ಜನತೆಯ ಆಯ್ಕೆ ಪ್ರಬುದ್ಧತೆಯಿಂದ ಕೂಡಿದೆ. ಉತ್ತಮ ಜನಪ್ರತಿನಿಧಿಯನ್ನು ಆಯ್ಕೆ ಮಾಡಿದ್ದಾರೆ ಎಂದರು.
ಕೆಂಪೇಗೌಡರು ಒಂದು ವರ್ಗಕ್ಕೆ ಸೀಮಿತವಾಗಿಲ್ಲ. ಅವರೂ ಎಲ್ಲಾ ವರ್ಗದ ಜಾತಿ ಜನಾಂಗದ ಒಳಿತಿಗಾಗಿ ದುಡಿದ್ದಿದ್ದಾರೆ ಎಂದರು
ತಹಶೀಲ್ದಾರ್ ನಯೀಂ ಉನ್ನಿಸಾ ಅವರು ಮಾತನಾಡಿ ಉತ್ತಮ ಸಮಾಜ ನಿರ್ಮಿಸುವಲ್ಲಿ ಕೆಂಪೇಗೌಡರು ಹಾಕಿಕೊಟ್ಟ ಮಾರ್ಗದಲ್ಲೇ ನಡೆದು ಇತರರಿಗೆ ಮಾದರಿಯಾಗೋಣ. ಇದಕ್ಕೆ ಜನರ ಸಹಕಾರ ಮುಖ್ಯವಾಗಿದ್ದು ಎಲ್ಲರೂ ಕೈಜೋಡಿಸಿ ಉತ್ತಮ ಸಮಾಜ ನಿರ್ಮಿಸುವತ್ತ ಹೆಜ್ಜೆ ಹಾಕೋಣ ಎಂದರು.
ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಠದ ಕಾರ್ಯದರ್ಶಿಗಳಾದ ಪ್ರಸನ್ನನಾಥ ಸ್ವಾಮೀಜಿ, ತಾಲ್ಲೂಕು ಪಂಚಾಯತ್ ಇಒ ಚಂದ್ರಮೌಳಿ, ಕ್ಷೇತ್ರ ಶಿಕ್ಷಾಧಿಕಾರಿ ಸುರೇಶ್, ಡಿವೈಎಸ್ಪಿ ಲಕ್ಷ್ಮಿ ನಾರಾಯಣ್ ಪ್ರಸಾದ್, ಮುಖಂಡರುಗಳಾದ ಸಿ.ಎನ್ ತಿಮ್ಮರಾಯ, ರಾಜೇಗೌಡ, ಹನುಮಂತಯ್ಯ, ಪುಟ್ಟಮ್ಮ ಮಾಹಿಗೌಡ, ಹೆಚ್ ಟಿ ಕೃಷ್ಣೇಗೌಡ ಸೇರಿದಂತೆ ಇನ್ನಿತರರು ಇದ್ದರು.