ಗುಂಡ್ಲುಪೇಟೆ: ಕ್ಷೇತ್ರದಲ್ಲಿ ನಿರುದ್ಯೋಗ, ರೈತರ ಸಮಸ್ಯೆಗಳ ನಿವಾರಣೆಗೆ ಹೆಚ್ಚು ಒತ್ತು ನೀಡಲಾಗುವುದು ಎಂದು ಶಾಸಕ ಎಚ್.ಎಂ.ಗಣೇಶಪ್ರಸಾದ್ ತಿಳಿಸಿದರು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಎಲ್ಲರೂ ಶಾಂತಿ, ಸಾಮರಸ್ಯದಿಂದ ಇರಬೇಕು. ಇದಕ್ಕೆ ಪೊಲೀಸರು ಸಹ ಸಹಕಾರ ನೀಡಿ ಠಾಣೆಗೆ ಬಂದ ಪ್ರಕರಣಗಳನ್ನು ಸಾಧ್ಯವಾದಷ್ಟು ರಾಜಿ ಸಂದಾನ ಮಾಡಿ ಕಳುಹಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.
ಕ್ಷೇತ್ರದಲ್ಲಿ ಅಭಿವೃದ್ಧಿ ಹೆಚ್ಚಿನ ಆದ್ಯತೆ ನೀಡಿ 5 ವರ್ಷದಲ್ಲಿ ಮಾದರಿಯಾಗಿಸಲು ಸರ್ಕಾರದಿಂದ ಅಗತ್ಯ ಅನುದಾನ ತರಲಾಗುವುದು. ಇದಕ್ಕೆ ನಿಮ್ಮೆಲ್ಲರ ಸಹಕಾರ ಅತ್ಯಗತ್ಯ. ಜೊತೆಗೆ ಶೈಕ್ಷಣಿಕ ಪ್ರಗತಿಗೂ ಕೂಡ ಗಮನಹರಿಸಿ, ಶಾಲಾ ಕೊಠಡಿಗಳ ದುರಸ್ತಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು.
ಚಿಂತಕ ಡಾ.ಕೃಷ್ಣಮೂರ್ತಿ ಚಮರಂ ಮಾತನಾಡಿ, ಇಂದು ಸಾಮಾಜಿಕ ಮಾಧ್ಯಮಗಳಲ್ಲಿ ಬರುವ ಹುಸಿ ವಿಚಾರಗಳಿಂದ ಯುವ ಜನತೆ ಹಾದಿ ತಪ್ಪುತ್ತಿದ್ದಾರೆ. ಅವರಲ್ಲಿ ಜಾಗೃತಿ ಮೂಡಿಸಲು ಚಿಂತಕ ವಲಯ ಬಹಳ ಶ್ರಮಿಸಬೇಕಾಗಿದೆ. ಮನುವಾದಿಗಳ ಹುನ್ನಾರಗಳನ್ನು ಎತ್ತಿ ತೋರಿಸುವ ಮೂಲಕ ಪ್ರಜಾಪ್ರಭುತ್ವ ಮತ್ತು ಸಂವಿಧಾನ ರಕ್ಷಿಸಲು ಮುಂದಾಗಬೇಕಾಗಿದೆ ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಚಿಂತಕರಾದ ಡಾ.ಹೆಚ್.ವಿ.ವಾಸು, ಸಾಹಿತಿ ಶಂಕನಪುರ ಮಹದೇವ, ಅಣಗಳ್ಳಿ ಬಸವರಾಜ್, ಅಹಿಂದ ಜವರಪ್ಪ, ಸುಭಾಷ್ ಮಾಡ್ರಹಳ್ಳಿ, ಆರ್.ಸೋಮಣ್ಣ, ಆರ್.ಡಿ.ಉಲ್ಲಾಸ್, ಮಲ್ಲೇಶ ವೀರನಪುರ, ಕೆ.ಎಂ.ಮನಸ್, ಮೋಹನ್, ಅಬ್ದುಲ್ ಮಾಲೀಕ್, ನಂಜುಂಡಸ್ವಾಮಿ, ರಂಗಸ್ವಾಮಿ, ಸೋಮಳ್ಳಿ ರವಿ, ನಾಗಯ್ಯ ಹೊನ್ನೆಗೌಡನಹಳ್ಳಿ, ರಾಜೇಶ್ ಸೇರಿದಂತೆ ಇತರರು ಹಾಜರಿದ್ದರು.