ಬಿಜಾಪುರ: ಛತ್ತೀಸಗಢದ ಬಿಜಾಪುರ ಜಿಲ್ಲೆಯಲ್ಲಿ ಇಂದು (ಶುಕ್ರವಾರ) ಬೆಳಿಗ್ಗೆ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಇಬ್ಬರು ನಕ್ಸಲರು ಹತರಾಗಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನೇಂದ್ರ ಮತ್ತು ಪುನ್ನೂರು ಗ್ರಾಮಗಳ ಅರಣ್ಯದಲ್ಲಿ ಬೆಳಿಗ್ಗೆ ಭದ್ರತಾ ಪಡೆ ಸಿಬ್ಬಂದಿ ನಕ್ಸಲರ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದ್ದಾಗ ಗುಂಡಿನ ಚಕಮಕಿ ನಡೆದಿದೆ ಎಂದು ಬಿಜಾಪುರ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ಯಾದವ್ ತಿಳಿಸಿದ್ದಾರೆ.
ಗುಂಡಿನ ಚಕಮಕಿ ಬಳಿಕ ಘಟನಾ ಸ್ಥಳದಲ್ಲಿ ಇಬ್ಬರು ನಕ್ಸಲರ ಶವಗಳು, 12 ರೈಫಲ್‌ಗಳು ಹಾಗೂ ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಸದ್ಯ ಈ ಪ್ರದೇಶದಲ್ಲಿ ಇನ್ನೂ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.
ಈ ಘಟನೆಯೊಂದಿಗೆ ಬಿಜಾಪುರ ಸೇರಿದಂತೆ ಏಳು ಜಿಲ್ಲೆಗಳನ್ನು ಒಳಗೊಂಡಿರುವ ಬಸ್ತಾರ್ ವಿಭಾಗದಲ್ಲಿ ನಡೆದ ಪ್ರತ್ಯೇಕ ಎನ್‌ಕೌಂಟರ್‌ಗಳ ಈ ವರ್ಷ ಈವರೆಗೆ 217 ಮಂದಿ ನಕ್ಸಲರು ಹತರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಗುರುವಾರ, ನಾರಾಯಣಪುರ ಜಿಲ್ಲೆಯ ದಕ್ಷಿಣ ಅಬುಜ್ಮದ್ ಪ್ರದೇಶದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ 7 ಮಂದಿ ನಕ್ಸಲರನ್ನು ಹತ್ಯೆಗೈಯಲಾಗಿತ್ತು.