ಎಚ್.ಡಿ.ಕೋಟೆ : ತಾಲೂಕಿನ ಅಂತರಸಂತೆ ಹೋಬಳಿಯ ಕನಕನಹಳ್ಳಿ ಗ್ರಾಮದ ಸರ್ವೆ ನಂಬರ್ 1, 3/1, 3/2 ರಲ್ಲಿ ಕಾವೇರಿ ನೀರಾವರಿ ನಿಗಮದ (ಸರ್ಕಾರಿ) ಜಾಗಕ್ಕೆ ತಂತಿ ಬೇಲಿ ನಿರ್ಮಾಣ ಮಾಡಿರುವುದನ್ನು ತೆರವುಗೊಳಿಸುವಂತೆ ಬೋರೆದೇವರ ಮುಂಟಿ ಗ್ರಾಮಸ್ಥರು ತಾಲೂಕು ಆಡಳಿತಕ್ಕೆ ದೂರು ಅರ್ಜಿಯನ್ನು ಸಲ್ಲಿಸಿದರು.
ಕನಕನಹಳ್ಳಿ ಗ್ರಾಮದ ರತ್ನಯ್ಯ ಬಿನ್ ಲೇಟ್ ದೊಡ್ಡೇಗೌಡ ಇವರು ಸರ್ಕಾರಿ ಜಮೀನಿಗೆ ತಂತಿ ಬೇಲಿಯನ್ನು ನಿರ್ಮಿಸಿ ಭೂಸ್ವಾಧೀನ ಮಾಡಿಕೊಂಡಿರುತ್ತಾರೆ. ಸರ್ಕಾರಿ ಜಮೀನನ್ನು ಅತಿಕ್ರಮಿಸಿರುವ ರತ್ನಯ್ಯ ವಿರುದ್ಧ ಸರ್ಕಾರಿ ಭೂಕಬಳಿಕೆ ಕಾಯ್ದೆ ಪ್ರಕಾರ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರು ದಾಖಲಿಸಿದರು.
ಈ ಅರ್ಜಿಯನ್ನು ಪರಿಶೀಲಿಸಿದ ತಾಲೂಕು ಆಡಳಿತ ಅಧಿಕಾರಿಗಳು ಕಬಿನಿ ಹಿನ್ನೀರಿನ ಪ್ರದೇಶಕ್ಕೆ ಭೂ ಸ್ವಾಧೀನವಾಗಿದ್ದು ಇದನ್ನು ರತ್ನಯ್ಯ ಬಿನ್ ಲೇಟ್ ದೊಡ್ಡೇಗೌಡ ರವರು ತಂತಿಬೇಲಿ ನಿರ್ಮಿಸಿಕೊಂಡಿರುವುದರಿಂದ ಸದರಿ ಸರ್ವೆ ನಂಬರ್ ಗಳಲ್ಲಿ ಜಮೀನುಗಳು ಕಬಿನಿ ಜಲಾಶಯದ ಹಿನ್ನೀರಿಗೆ ಭೂಸ್ವಾಧೀನಗೊಂಡಿದ್ದಲ್ಲಿ ತಹಶೀಲ್ದಾರ್ ಹಾಗೂ ಕಂದಾಯ ಇಲಾಖೆಗೆ ಅರ್ಜಿ ಸಲ್ಲಿಸಿಕೊಂಡು ಭೂಸ್ವಾಧೀನ ಜಮೀನಿನ ಗಡಿ ಗುರುತಿಸಿ ಕೊಂಡಲ್ಲಿ ಒತ್ತುವರಿ ತೆರವುಗೊಳಿಸಲು ಸೂಕ್ತ ರಕ್ಷಣೆ ನೀಡಲಾಗುವುದು ಎಂದು ಹಿಂಬರವನ್ನು ನೀಡಲಾಗಿತ್ತು.
ಅದರಂತೆ ತಾಲೂಕು ತಹಶೀಲ್ದಾರ್ ಆದೇಶದ ಮೇರೆಗೆ ಗ್ರಾಮ ಆಡಳಿತ ಅಧಿಕಾರಿ, ರಾಜ್ಯಸ್ವ ನಿರೀಕ್ಷಕರು, ಭೂ ಮಾಪಕರು, ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಸ್ಥಳಕ್ಕೆ ಭೇಟಿ ನೀಡಿ ಕನಕನಹಳ್ಳಿ ಗ್ರಾಮದ ಸರ್ವೆ ನಂಬರ್ 15/1ರ ಗ್ರಾಮದ ಜಾಗದ ಬಾಬ್ತು ಮುಳುಗಡೆ ಪ್ರದೇಶವನ್ನು ಅಳತೆ ಮಾಡಿ ಗುರುತಿಸಿ ಸದರಿ ಸರ್ವೆ ನಂಬರ್ 3,1,15,16,13, 17,2,5,14 ಗಳ ಬಾಬ್ತು ಮುಳುಗಡೆ ಪ್ರದೇಶವನ್ನು ಅಳತೆ ಮಾಡಿ ಗಡಿ ಗುರುತಿಸಿ ಒತ್ತುವರಿಯನ್ನು ತೆರವು ಮಾಡಿರುತ್ತಾರೆ.
ಅಳತೆಯ ಸಂದರ್ಭದಲ್ಲಿ ಇಂಜಿನಿಯರ್ ಮಹೇಂದ್ರ ಸರ್ವೇ ಅಧಿಕಾರಿ ಪ್ರಕಾಶ್, ಶಂಭುಲಿಂಗ, ಆರ್ ಐ ಯೋಗೇಶ್, ವಿಎ ಶಂಕರ್, ಗ್ರಾಮದ ಮುಖಂಡರಾದ ವೇಣುಗೋಪಾಲ್, ರೇವಯ್ಯ, ಜೆಸಿಬಿ ರವಿ, ಸುರೇಶ್, ನಾಗರಾಜು, ಕೃಷ್ಣ, ರವಿ, ಪುಟ್ಟರಾಜು, ಗೋವಿಂದನಾಯಕ, ದೊರೆಸ್ವಾಮಿ, ಸಣ್ಣಯ್ಯ, ವಿಜಿ, ಶಿವನಾಯಕ, ವೆಂಕಟಸ್ವಾಮಿ, ವೀರಭದ್ರ ಸೇರಿದಂತೆ ಗ್ರಾಮಸ್ಥರು ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.



