ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಅಂತ್ಯ ಕಾಣುವುದು ನಿಶ್ಚಿತ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಹೇಳಿದ್ದಾರೆ.
ದೇವೇಗೌಡರು, ಕಳೆದ ೬೦ ವರ್ಷಗಳಿಂದ ರಾಜಕೀಯ ಮಾಡಿಕೊಂಡು ಬಂದಿದ್ದೇನೆ. ಇವತ್ತು ಹೇಳ್ತೀನಿ ಕರ್ನಾಟಕದಲ್ಲಿ ಕಾಂಗ್ರೆಸ್ ಅಂತ್ಯ ಕಾಣುತ್ತದೆ. ನಾವು ಸೋಲಿಸಿಯೇ ಸೋಲಿಸ್ತೀವಿ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ನಾಯಕತ್ವದಲ್ಲಿ ಕರ್ನಾಟಕದ ಕಾಂಗ್ರೆಸ್ ಅಂತ್ಯ ಕಾಣುತ್ತೆ ಎಂದರು. ಇದೇ ವೇಳೆ ಹಿಂದೂ ಕಾರ್ಯಕರ್ತರ ವಿರುದ್ಧ ಕರ್ನಾಟಕ ಸರ್ಕಾರ ತೆಗೆದುಕೊಳ್ಳುತ್ತಿರುವ ಕ್ರಮದ ಬಗ್ಗೆ ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಮಾಜಿ ಪ್ರಧಾನಿ, ರಾಜ್ಯ ಕಾಂಗ್ರೆಸ್ ಸರ್ಕಾರ ಸೇಡಿನ ರಾಜಕಾರಣ ಮಾಡುತ್ತಿದೆ. ಎನ್‌ಡಿಎ ಸೋಲಿಸಿ ೨೦ ಸ್ಥಾನಗಳನ್ನು ಗೆಲ್ಲುವ ಕನಸು ಕಾಣುತ್ತಿದ್ದಾರೆ. ಆದರೆ ಅವರ ಕನಸು ಕನಸಾಗಿಯೇ ಉಳಿಯುತ್ತದೆ ಎಂದರು.
ರಾಜ್ಯದಲ್ಲಿ ಈ ಬಾರಿ ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ನಾವು ನಿರೀಕ್ಷೆಗಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತೇವೆ. ಜನಾದೇಶ ನಮ್ಮ ಪರವಾಗಿದೆ ಎಂದು ಹೇಳಿದ ಅವರು, ಸೀಟು ಹಂಚಿಕೆಯಲ್ಲಿ ಯಾವುದೇ ಸಮಸ್ಯೆ ಇಲ್ಲ. ನಾವು ಕಾಂಗ್ರೆಸ್ ಅನ್ನು ಸೋಲಿಸಬೇಕು. ಈ ವಿಚಾರದಲ್ಲಿ ಯಾವುದೇ ಗೊಂದಲ ಇಲ್ಲ ಎಂದರು. ನಾನು ಜಾತ್ಯತೀತ ಆದರ್ಶಗಳಲ್ಲಿ ಸ್ವಲ್ಪವೂ ರಾಜಿ ಮಾಡಿಕೊಳ್ಳದೆ ದೇಶವನ್ನು ಆಳಿದ್ದೇನೆ. ನೀವು (ಕಾಂಗ್ರೆಸ್) ಮತ್ತು ಇಂಡಿಯಾ ಬಣ, ದೇವೇಗೌಡರನ್ನು ಅವಮಾನಿಸಿದ್ದೀರಿ. ನಾನು ಇಂದು ನಿಮಗೆ ಹೇಳುತ್ತಿದ್ದೇನೆ, ಕರ್ನಾಟಕದಲ್ಲಿ ಕಾಂಗ್ರೆಸ್ ಅನ್ನು ಸೋಲಿಸಬೇಕು ಮತ್ತು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ನೇತೃತ್ವದಲ್ಲಿ ಕಾಂಗ್ರೆಸ್ ಯುಗ ಅಂತ್ಯವಾಗಬೇಕು ಎಂದು ತಾವು ನಿರ್ಧರಿಸಿರುವುದಾಗಿ ದೇವೇಗೌಡರು ತಿಳಿಸಿದರು.
ಇತ್ತೀಚಿಗೆ ಮುಕ್ತಾಯಗೊಂಡ ಐದು ರಾಜ್ಯಗಳ ಚುನಾವಣೆಗೆ ಅವರು ಎಷ್ಟು ಹಣ ತೆಗೆದುಕೊಂಡು ಹೋಗಿದ್ದಾರೆ? ಡಿಸಿಎಂ ಡಿಕೆ ಶಿವಕುಮಾರ್ ಎಷ್ಟು ಹಣ ಸಾಗಿಸಿದ್ದಾರೆ, ಎಷ್ಟು ಹಣ ಸೀಜ್ ಆಗಿದೆ ಎಂದು ಪ್ರಶ್ನಿಸಿದ ದೇವೇಗೌಡರು, ಈ ಬಗ್ಗೆ ಚುನಾವಣೆ ಆಯೋಗ ಗಮನ ಹರಿಸಿದೆ ಎಂದರು.
ಟಿಪ್ಪು ಸುಲ್ತಾನ್ ಬಿಟ್ರೆ ಬೇರೇನೂ ಇಲ್ವಾ: ಮುಖ್ಯಮಂತ್ರಿ ಸಿದ್ದರಾಮಯ್ಯ ಇಡೀ ದೇಶಕ್ಕೆ ಬುದ್ಧಿ ಹೇಳುತ್ತಾರೆ. ಅವರಿಗೆ ಅಕ್ರಮ ತಡೆಯಲು ಶಕ್ತಿ ಇದೆಯಾ? ಟಿಪ್ಪು ಸುಲ್ತಾನ್ ವಿಚಾರ ಬಿಟ್ಟರೆ ಈ ದೇಶದಲ್ಲಿ ಬೇರೆ ಬೇರೇನೂ ಇಲ್ವಾ?
ಹೆಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ