ಶ್ರೀನಗರ್: ಜಮ್ಮು ಕಾಶ್ಮೀರದಲ್ಲಿ ಇಂಡಿಯಾ ಮೈತ್ರಿಕೂಟದ ಸದಸ್ಯ ಪಕ್ಷಗಳ ನಡುವೆ ಚುನಾವಣಾ ಪೂರ್ವ ಮೈತ್ರಿ ಸಾಧಿಸಲು ಕಾಂಗ್ರೆಸ್ ನಡೆಸಿದ ಪ್ರಯತ್ನ ವ್ಯರ್ಥವಾಗಿದ್ದು. ತಮ್ಮ ಪಕ್ಷ ಕಣಿವೆಯ ಎಲ್ಲಾ ಮೂರು ಲೋಕಸಭಾ ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ ಎಂದು ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಇಂದು ಹೇಳಿದ್ದಾರೆ.
ಅನಂತ್‌ನಾಗ್ ಲೋಕಸಭಾ ಸ್ಥಾನಕ್ಕೆ ನ್ಯಾಷನಲ್ ಕಾನ್ಫರೆನ್ಸ್ ತನ್ನ ಅಭ್ಯರ್ಥಿಯಾಗಿ ಮಿಯಾನ್ ಅಲ್ತಾಫ್ ಅವರನ್ನು ಘೋಷಿಸಿದ ಬೆನ್ನಿಗೆ ಪಿಡಿಪಿಯ ಇಂದಿನ ಹೇಳಿಕೆ ಬಂದಿದೆ. ಅನಂತ್‌ನಾಗ್ ಕ್ಷೇತ್ರವು ಮೆಹಬೂಬಾ ಮುಫ್ತಿ ಅವರ ತವರು ಕ್ಷೇತ್ರವಾಗಿದೆ.
ಪಿಡಿಪಿ ಲೋಕಸಭಾ ಚುನಾವಣೆ ಸ್ಪರ್ಧಿಸುವುದಿಲ್ಲ, ಪಿಡಿಪಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ ಇಂಡಿಯಾ ಮೈತ್ರಿಕೂಟದ ಭಾಗವಾಗಲಿದೆ ಎಂದು ನ್ಯಾಷನಲ್ ಕಾನ್ಫರೆನ್ಸ್ ಉಪಾಧ್ಯಕ್ಷ ಉಮರ್ ಅಬ್ದುಲ್ಲಾ ಮಂಗಳವಾರ ಹೇಳಿದ್ದರು. ಆದರೆ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಮೆಹಬೂಬಾ, ನ್ಯಾಷನಲ್ ಕಾನ್ಫರೆನ್ಸ್ ಅನ್ನು ಟೀಕಿಸಿದರು. ?ಉಮರ್ ಪ್ರಕಾರ ಪಿಡಿಪಿ ಎಲ್ಲಿಯೂ ಅಸ್ತಿತ್ವದಲ್ಲಿಲ್ಲ. ಉಮರ್ ನಿನ್ನೆ ಹೇಳಿದ್ದನ್ನು ಮುಂಚೆಯೇ ಹೇಳಬಹುದಾಗಿತ್ತು. ಅವರ ಮಾತು ಪಿಡಿಪಿ ಕಾರ್ಯಕರ್ತರನ್ನು ಕೆರಳಿಸಿದೆ, ಎಂದು ಮೆಹಬೂಬಾ ಹೇಳಿದರು.