ಕೋಲಾರ: ಕೋಲಾರದಲ್ಲಿಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಪ್ರವಾಸ ಹಮ್ಮಿಕೊಂಡಿದ್ದರು. ಬೆಳಗ್ಗೆ 10.30 ಗಂಟೆಗೆ ಕೋಲಾರ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಸಚಿವ ಕೆ.ಜೆ.ಜಾರ್ಜ್ಆಗಮಿಸಿದ್ದರು. ಸಚಿವರು ಬರುತ್ತಿದ್ದಂತೆ ಕಾಂಗ್ರೆಸ್ ಕಚೇರಿಯಲ್ಲಿ ವಿದ್ಯುತ್ ಕಟ್ ಆಯಿತು. ಅಕಸ್ಮಿಕವಾಗಿ ವಿದ್ಯುತ್ ಹೋಗಿರಬಹುದು ಎಂದು ಅರಿತ ಸಚಿವರು, ಸಭೆಯನ್ನು ಮುಂದುವರಿಸಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿ ಸಭೆ ಮುಗಿಸಿದರೂ ವಿದ್ಯುತ್ ಬರಲೇ ಇಲ್ಲ. ಬಳಿಕ ಜಿಲ್ಲಾ ಪಂಚಾಯತ್ ನಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಈ ವೇಳೆ ಕೂಡ ವಿದ್ಯುತ್ ಹೋಗಿ ಬಂತು. ವಿದ್ಯುತ್ ಕಣ್ಣಾಮುಚ್ಚಾಲೆ ಆಟಕ್ಕೆ ಬೇಸತ್ತ ಸಚಿವ ಕೆ.ಜೆ.ಜಾರ್ಜ್, ಬೆಸ್ಕಾಂ ಅಧಿಕಾರಿಗಳಿಗೆ ಸಭೆಯಲ್ಲಿಯೇ ಕ್ಲಾಸ್ ತೆಗೆದುಕೊಂಡರು.
ನಂತರ ಬೆಂಗಳೂರಿಗೆ ಹೋಗುವಾಗ ಇಇ ಶೋಭಾ ಅವರನ್ನು ತೀವ್ರ ತರಾಟೆ ತೆಗೆದುಕೊಂಡರು. ಈ ಸಂದರ್ಭದಲ್ಲಿ ಅಧಿಕಾರಿಗಳು ಸಮಾಧಾನ ಪಡಿಸಿದರು. ಇನ್ನು ವಿದ್ಯುತ್ ಕಿರಿಕಿರಿ ಬಗ್ಗೆ ನಾನು ಅಡ್ಜೆಸ್ಟ್ ಮಾಡಿಕೊಳ್ಳುವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಂದಾಗ ವಿದ್ಯುತ್ ಸಮಸ್ಯೆ ಆಗಬಾರದು. ಕೂಡಲೇ ಈ ಬಗ್ಗೆ ಎಚ್ಚೇತ್ತುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸಚಿವರು ಎಚ್ಚರಿಕೆ ನೀಡಿದರು.
ಇನ್ನು ಸಭೆಯಲ್ಲಿ ವಿದ್ಯುತ್ ಹೋಗಿ ಬರುತ್ತಿದ್ದರಿಂದ ಅಧಿಕಾರಿಗಳು ಮತ್ತು ಜನರ ಮುಂದೆ ಮುಜಗರಕ್ಕೀಡಾದ ಸಚಿವ ಕೆ.ಜೆ.ಜಾರ್ಜ್, ರಾಜ್ಯದಲ್ಲಿ ಎಲ್ಲೂ ವಿದ್ಯುತ್ ಸಮಸ್ಯೆ ಇಲ್ಲ,. ಸಮರ್ಪಕವಾಗಿ ವಿದ್ಯುತ್ನ್ನು ಎಲ್ಲೆಡೆ ಸರಬರಾಜು ಮಾಡಲಾಗುತ್ತಿದೆ. ಇಲ್ಲಿ ಸಹ ವಿದ್ಯುತ್ ಸಮಸ್ಯೆ ಇಲ್ಲ, ಓವರ್ ಲೋಡ್ನಿಂದ ಮತ್ತು ಮುನ್ನೆಚ್ಚರಿಕೆ ಕ್ರಮವಾಗಿ ಯುಪಿಎಸ್ಗೆ ಸಂಪರ್ಕ ನೀಡಿದ್ದರಿಂದ ವಿದ್ಯುತ್ ಟ್ರಿಪ್ ಆಗಿದೆ ಎಂದು ಸಮರ್ಥನೆ ನೀಡಿದರು. ಜೊತೆಗೆ ಅಧಿಕಾರಿಯನ್ನು ಕರೆದು ಮಾಧ್ಯಮಗಳಿಗೆ ವಿವರಣೆ ನೀಡುವಂತೆ ಬೆಸ್ಕಾಂ ಅಧಿಕಾರಿಗೆ ತಿಳಿಸಿದರು.
ನಮ್ಮ ಬೆಸ್ಕಾಂನಿಂದ ಸಮಸ್ಯೆ ಆಗಿಲ್ಲ, ಜನರೇಟರ್ ಮೂಲಕ ವಿದ್ಯುತ್ ಸಂಪರ್ಕ ಕೊಟ್ಡಿದ್ದರಿಂದ ಸಮಸ್ಯೆ ಆಗಿದೆ ಎಂದು ಸಚಿವರ ಮುಂದೆ ಅಧಿಕಾರಿ ಸಮಜಾಯಿಸಿ ನೀಡಿದರು. ಒಟ್ಟಾರೆ ಇಂಧನ ಸಚಿವ ಜಾರ್ಜ್ಗೆ ಬೆಸ್ಕಾಂ ಅಧಿಕಾರಿಗಳ ಎಡವಟ್ಟುನಿಂದ ಕರೆಂಟ್ ಶಾಕ್ ಕೊಡುವ ಮೂಲಕ ಮುಜಗರಕ್ಕೀಡು ಮಾಡಿದ್ದಂತೂ ಸುಳ್ಳಲ್ಲ. ಘಟನೆ ಸಂಬಂಧ ಸರ್ಕಾರಕ್ಕೂ ಮುಜಗರವಾಗಿದ್ದು, ಅಧಿಕಾರಿಗಳ ವಿರುದ್ದ ಕ್ರಮ ಆಗುತ್ತಾ ಎನ್ನುವುದನ್ನ ಕಾದು ನೋಡಬೇಕಾಗಿದೆ.