ಪಾಂಡವಪುರ : ಕಾಟೇರಾ ಚಲನಚಿತ್ರದ ಭರ್ಜರಿ ಯಶಸ್ಸಿನಿಂದ ಬೀಗುತ್ತಿರುವ ನಟ ದರ್ಶನ್ ಇಲ್ಲಿನ ಬಿಜಿಎಸ್ ಶಾಲಾ ಕಾಲೇಜಿನ ವಾರ್ಷಿಕೋತ್ಸವ ಮತ್ತು ಚುಂಚಶ್ರೀಗಳ ೮೦ನೇ ಜಯಂತ್ಯೂತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳನ್ನು ರೋಮಾಂಚನಗೊಳಿಸಿದರು.
ನಿನ್ನೆ ರಾತ್ರಿ ಸುಮಾರು ೮.೨೦ಕ್ಕೆ ನಟ ದರ್ಶನ್ ವೇದಿಕೆಗೆ ಆಗಮಿಸುತ್ತಿದ್ದಂತೆ ವಿದ್ಯಾರ್ಥಿಗಳ ಚಪ್ಪಾಳೆ, ಶಿಳ್ಳೆಗಳು, ಕೂಗಾಟ ಮುಗಿಲು ಮುಟ್ಟಿದವು. ಈ ಸಂದರ್ಭದಲ್ಲಿ ಅವರು ಮಾತನಾಡಿ, ಸ್ಟೂಡೆಂಟ್ ಲೈಫ್ ಮತ್ತೆ ಸಿಗಲ್ಲ ಎಂಜಾಯ್ ಮಾಡಿ, ಆದರೇ, ನಿಮ್ಮ ಪೋಷಕರು, ಶಾಲಾ ಕಾಲೇಜಿಗೆ ಕೆಟ್ಟ ಹೆಸರು ತರಬೇಡಿಎಂದು ಕಿವಿಮಾತು ಹೇಳಿದರು. ವಿದ್ಯಾರ್ಥಿಗಳು ಚೆನ್ನಾಗಿ ವ್ಯಾಸಂಗ ಮಾಡಬೇಕು. ತಂದೆ ತಾಯಿಗೆ ಗೌರವ ಕೊಡಬೇಕು. ಮುಂದೆ ಇಂತಹ ಅವಕಾಶ ಸಿಗಲ್ಲ. ಈಗ ನನ್ನನ್ನೇ ನೋಡಿ ಏನೂ ತಪ್ಪು ಮಾಡದಿದ್ದರೂ ಕೇಸ್ ಮೇಲೆ ಕೇಸು ಹಾಕ್ತಾವ್ರೆ, ನಿಮ್ಕತೆ ಮುಂದಕ್ಕೆ ಹೇಗಾಗುತ್ತೋ ಗೊತ್ತಿಲ್ಲ ಈಗ ಎಂಜಾಯ್ ಮಾಡಿ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪತ್ರಕರ್ತ ರಹಮತ್ ಕಂಚುಗಾರ್ ಮಾತನಾಡಿ, ಶ್ರೀ ಆದಿ ಚುಂಚನಗಿರಿ ಮಠ ಸೌಹಾರ್ದತೆಯ ಪ್ರತೀಕ, ಎಲ್ಲ ಧರ್ಮಗಳನ್ನು ಪ್ರತಿನಿಧಿಸುತ್ತಿದೆ. ಅಲ್ಲದೇ ರಾಜ್ಯದ ಉದ್ದಗಲಕ್ಕೂ ಅಕ್ಷರ, ಅನ್ನ, ಆಶ್ರಯ, ದಾಸೋಹ ನೀಡುವ ಮೂಲಕ ಶಿಕ್ಷಣ ಕ್ರಾಂತಿ ಮಾಡುತ್ತಿದೆ. ಬಿಜಿಎಸ್ ಸಂಸ್ಥೆ ಉತ್ತರ ಕರ್ನಾಟಕದಲ್ಲಿ ಸಾವಿರಾರು ಬಡ ಮಕ್ಕಳಿಗೆ ಅಕ್ಷರ ದಾಸೋಹ ನೀಡುತ್ತಿದೆ ಎಂದು ಶ್ಲಾಘಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಚಂದ್ರಶೇಖರ್ ಮಾತನಾಡಿ, ಬಿಜಿಎಸ್ ಶಿಕ್ಷಣ ಸಂಸ್ಥೆಗಳು ಶಿಕ್ಷಣದ ಜತೆ ಸಂಸ್ಕಾರ, ಮಾನವೀಯತೆ, ಮೌಲ್ಯಗಳನ್ನು ಕಲಿಸುತ್ತಿವೆ. ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ ಅವರಿಗೆ ಪ್ರೋತ್ಸಾಹವನ್ನೂ ನೀಡುತ್ತಿದೆ ಎಂದರು.
ಹಿರಿಯ ನಟ ಜೈ ಜಗದೀಶ್, ನಟಿ ವಿಜಯಲಕ್ಷ್ಮೀಸಿಂಗ್, ಸಿದ್ದ ಸಂಸ್ಥಾನ ಮಠದ ಪೀಠಾಧಿಪತಿ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ, ಬಿಜಿಎಸ್ ಎಜುಕೇಷನ್ ಸೆಂಟರ್ ಹೇಮಗಿರಿ ಶಾಖೆಯ ಕಾರ್ಯದರ್ಶಿ ಡಾ.ಜಿ.ಎಸ್.ರಾಮಕೃಷ್ಣೇಗೌಡ ಮುಂತಾದವರು ಮಾತನಾಡಿದರು. ಇದೇ ಸಂದರ್ಭದಲ್ಲಿ ಬಿಜಿಎಸ್ ಚಿಣ್ಣರ ಕುಂಚ ಸಂಚಿಕೆ, ಬಿಜಿಎಸ್ ಡೈರಿ, ಬಿಜಿಎಸ್ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು. ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಸಾವಿರಾರು ವಿದ್ಯಾರ್ಥಿಗಳು, ಪೋಷಕರು ಮತ್ತು ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.