ನಂಜನಗೂಡು : ತಾಲ್ಲೂಕಿನ ನಗರ್ಲೆ ಗ್ರಾಮದ ಕಾಂಗ್ರೆಸ್ ಮುಖಂಡರು ಕೈಲಾಗದವರು ಆದ ಕಾರಣ ಯಾವುದೇ ಕಾಂಗ್ರೆಸ್ ಮುಖಂಡರನ್ನ ಗ್ರಾಮಕ್ಕೆ ನಿಷೇಧಿಸಲಾಗಿದೆ ಎಂಬ ಫ್ಲೆಕ್ಸ್‌ಗಳು ನಗರ್ಲೆ ಗ್ರಾಮದಲ್ಲಿ ರಾರಾಜಿಸುತ್ತಿವೆ.
ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುತ್ತಿರುವ ವರುಣಾ ವಿಧಾನಸಭಾ ಕ್ಷೇತ್ರದ ನಗರ್ಲೆ ಗ್ರಾಮದ ಸಾಕಷ್ಟು ಸ್ಥಳಗಳಲ್ಲಿ ಇಂತಹ ಭಿತ್ತಿ ಫಲಕಗಳನ್ನ ಅಳವಡಿಸಲಾಗಿದೆ. ಮುಖ್ಯಮಂತ್ರಿಗಳ ತವರು ಕ್ಷೇತ್ರದಲ್ಲೇ ಇಂತಹ ಸಂದೇಶ ಕಾಂಗ್ರೆಸ್ ಗೆ ಮುಜುಗರ ತಂದಿದೆ.
ನಗರ್ಲೆ ಗ್ರಾಮದ ಅಭಿವೃದ್ದಿ ಬಗ್ಗೆ ಬೇಸತ್ತಿರುವ ಗ್ರಾಮಸ್ಥರು ಇಂತಹ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಯಾವುದೇ ಕಾಂಗ್ರೆಸ್ ಮುಖಂಡರು ಗ್ರಾಮಕ್ಕೆ ನಿಷೇಧಿಸಿದೆ ಎಂಬ ಸಂದೇಶ ಚರ್ಚೆಗೆ ಗ್ರಾಸವಾಗಿದೆ. ಕೇವಲ ಸ್ಥಳೀಯ ಮುಖಂಡರು ಮಾತ್ರವಲ್ಲದೆ ಯಾವುದೇ ಮುಖಂಡರು ಎಂಬ ಪದ ಬಳಕೆ ಕಾಂಗ್ರೆಸ್ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.