ಮೈಸೂರು: ಪರಿಸರವು ಪ್ರತಿಯೊಂದು ಜೀವರಾಶಿಗೆ ಅತ್ಯಂತ ಅಮೂಲ್ಯ ಕೊಡುಗೆಯಾಗಿದೆ. ಪರಿಸರದಲ್ಲಿನ ಗಾಳಿ, ನೀರು, ಮಣ್ಣು, ಮರಗಳು, ಕಾಡುಗಳು, ಸಾಗರಗಳು ಇತ್ಯಾದಿಗಳು ಎಂದೆಂದಿಗೂ ಉಳಿಯುವುದು ಬಹಳ ಮುಖ್ಯ. ನಾವು ಅವಲಂಬಿತರಾಗಿರುವ ಈ ಪರಿಸರ ಯುಗ ಯುಗಳವರೆಗೂ ಹೀಗೆಯೂ ಉಳಿಯಬೇಕಿದೆ ಎಂದು ವೈದ್ಯರು ಹಾಗೂ ಹಿರಿಯ ಶಸ್ತ್ರ ಚಿಕಿತ್ಸಕರೂ ಆದ ಡಾ. ಅಮೀರ್ ಅಹಮದ್ ತಿಳಿಸಿದರು.
ಸಮರ್ಥನಂ ಅಂಗವಿಕಲರ ಸಂಸ್ಥೆಯ ವತಿಯಿಂದ ಮೈಸೂರು ನಗರದ ವಿಜಯನಗರ ೨ನೇ ಹಂತದಲ್ಲಿರುವ ಸಮರ್ಥನಂ ಬುದ್ಧಿ ವಿಕಲಚೇತನರ ಶಾಲೆಯ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ೬ನೇ ವರ್ಷದ ಮನಮಹೋತ್ಸವ ಆಚರಿಸಲಾಯಿತು.
ಬೇಸರವೆಂದರೆ ನಾವು ಮಾಡುತ್ತಿರುವ ಅರಣ್ಯನಾಶ, ಗಣಿಗಾರಿಕೆ, ಕೈಗಾರಿಕೀಕರಣ ಸೇರಿದಂತೆ ಹಲವಾರು ಮಾನವ ಚಟುವಟಿಕೆಗಳಿಂದ ಪರಿಸರವು ಇಂದು ಹಾನಿಗೊಳಗಾಗುತ್ತಿದೆ. ಪರಿಸರದೊಂದಿಗೆ ಮಾನವನ ಹಸ್ತಕ್ಷೇಪದಿಂದಾಗಿ ಈ ಹಾನಿಯನ್ನು ಕಡಿಮೆ ಮಾಡುವುದು ಮತ್ತು ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವ ಜವಾಬ್ದಾರಿ ನಮ್ಮದಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಸಮರ್ಥನಂ ಸಂಸ್ಥೆಯ ಮೈಸೂರು ವಿಭಾಗದ ಮುಖ್ಯಸ್ಥ ಎಂ.ಶಿವರಾಜು ಮಾತನಾಡಿ, ಮಾನವ ಸೇರಿದಂತೆ ಇತರೆ ಪ್ರಾಣಿ, ಪಕ್ಷಿಗಳು, ಸೇರಿದಂತೆ ಪ್ರತಿಯೊಂದು ಜೀವ ಸಂಕುಲ ಆಹಾರ, ಗಾಳಿ, ನೀರು ಇತರೆ ಅಗತ್ಯತೆಗಳಿಗಾಗಿ ಪರಿಸರವನ್ನ ಅವಲಂಭಿಸಿದೆ ಎಂದರೆ ತಪ್ಪಾಗಲಾರದು. ಇದರೆ ಇತ್ತಿಚಿನ ದಿನಗಳಲ್ಲಿ ಮಾನವನು ಆಧುನಿಕ ಬದುಕಿನ ಗೀಳಿಗೆ ಬಿದ್ದು ಪರಿಸರವನ್ನು ನಾಶ ಮಾಡುತ್ತಿದ್ದಾನೆ. ಈಗ ಮಾನವನ ಈ ದುರಾಸೆಯಿಂದ ಗಾಳಿ, ನೀರು, ಮಣ್ಣು ಮುಂತಾದ ಪರಿಸರದ ಪ್ರತಿಯೊಂದು ಅಂಶವೂ ಕಲುಷಿತಗೊಂಡಿದೆ. ಮನುಷ್ಯ ತನ್ನ ಅಭಿವೃದ್ಧಿಗಾಗಿ ತನಗೆ ಅರಿವಿಲ್ಲದಂತೆ ಪರಿಸರವನ್ನು ಹಾಳು ಮಾಡುತ್ತಿದ್ದಾನೆ ಎಂದರು.

ಇದೆ ಸಂದರ್ಭದಲ್ಲಿ ಸ್ಕೊಡ್‌ವೆಸ್ ಸಂಸ್ಥೆಯ ಕೆ.ಎನ್.ರವಿ, ಪ್ರತಾಪ್, ಮುಖ್ಯೋಪಾಧ್ಯಾಯನಿ ಭ್ರಮರಂಭ, ಶಿಕ್ಷಕರಾದ ಪದ್ಮ, ವಿದ್ಯಾವತಿ, ಬೃಂದ ಬಾಯಿ, ಸಿಬ್ಬಂದಿಯಾದ ಮಂಜುಳ, ಹರೀಶ್, ನೀದಾತಾಜ್, ಮಹದೇವ ಸೇರಿದಂತೆ ಮೊದಲಾದವರು ಉಪಸ್ಥಿತರದ್ದರು.