Friday, April 4, 2025
Google search engine

Homeಕಾಡು-ಮೇಡುಸತ್ತಿದ್ದ ಹುಲಿ, ಚಿರತೆ ಗುಟ್ಟಾಗಿ ಹೂತ ಆರ್‍ಎಫ್‍ಒ ವಿರುದ್ಧ ಕ್ರಮಕ್ಕೆ ಪರಿಸರ ಹೋರಾಟಗಾರ ಹೂವರ್ ಒತ್ತಾಯ

ಸತ್ತಿದ್ದ ಹುಲಿ, ಚಿರತೆ ಗುಟ್ಟಾಗಿ ಹೂತ ಆರ್‍ಎಫ್‍ಒ ವಿರುದ್ಧ ಕ್ರಮಕ್ಕೆ ಪರಿಸರ ಹೋರಾಟಗಾರ ಹೂವರ್ ಒತ್ತಾಯ

ಗುಂಡ್ಲುಪೇಟೆ: ಮೇಲಾಧಿಕಾರಿಗಳ ಗಮನಕ್ಕೆ ತಾರದೇ ಮೃತಪಟ್ಟಿದ್ದ ಹುಲಿ ಹಾಗೂ ಚಿರತೆಯನ್ನು ಬಂಡೀಪುರದ ಮೊಳೆಯೂರು ವಲಯದ  ಆರ್‍ಎಫ್‍ಒ ಪುಟ್ಟರಾಜು ಗುಟ್ಟಾಗಿ ಹೂತಿದ್ದಾರೆ ಎಂದು ಪರಿಸರ ಹೋರಾಟಗಾರ ಜೋಸೆಫ್ ಹೂವರ್ ಗಂಭೀರವಾಗಿ ಆರೋಪ ಮಾಡಿದ್ದಾರೆ.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗೋಪಾಲಸ್ವಾಮಿ ಬೆಟ್ಟ ವಲಯದ ಕಚೇರಿ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉರುಳಿಗೆ ಸಿಕ್ಕಿಬಿದ್ದಿದ್ದ ಹುಲಿ ಮತ್ತು ಅಂಗಚ್ಛೇಧಗೊಂಡ ಚಿರತೆಯ ಶವವನ್ನು ಮೊಳೆಯೂರು ಆರ್‍ಎಫ್‍ಒ ಪುಟ್ಟರಾಜು ಗುಟ್ಟಾಗಿ ಹೂತಿಟ್ಟಿದ್ದರು. ಈ ವಿಚಾರ ನಮ್ಮ ಗಮನಕ್ಕೆ ಬರಲಾಗಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದೆ. ಜೊತೆಗೆ, 2022ರ ನವೆಂಬರ್‍ನಲ್ಲಿ ಅಂದಿನ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಕೂಡ ಬರೆಯಲಾಗಿದ್ದರೂ ತನಿಖೆ ಮಾತ್ರ ಆಗಿಲ್ಲ ಎಂದು ಕಿಡಿಕಾರಿದರು.

ಭಾರತದ ಪ್ರಮುಖ ವನ್ಯಜೀವಿಗಳಾದ ಹುಲಿ ಮತ್ತು ಚಿರತೆಯ ಶವಗಳನ್ನು ರಹಸ್ಯವಾಗಿ ಹೂಳುವಲ್ಲಿ ಭಾಗಿಯಾಗಿರುವ ಎಲ್ಲರ ವಿವರಗಳನ್ನು ನಾವು ಒದಗಿಸಿದ್ದೇವೆ. ಚಿರತೆಯ ತಲೆ ಮತ್ತು ಪಾದಗಳನ್ನು ಕಳ್ಳ ಬೇಟೆಗಾರರು ಕದ್ದೊಯ್ದಿರುವ ಶಂಕೆ ವ್ಯಕ್ತವಾಗಿದ್ದು, ಅರಣ್ಯ ವೀಕ್ಷಕರು ಮಾತ್ರ ಘಟನೆಯ ಬಲಿಪಶುಗಳಾಗಿದ್ದಾರೆ ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.

ಹುಲಿ ಮತ್ತು ಚಿರತೆಯ ರಹಸ್ಯವಾಗಿ ಹೂತಿದ್ದ ಮಾಹಿತಿ ಹೊರ ಬರುತ್ತಿದ್ದಂತೆ ಘಟನೆಯ ಸಾಕ್ಷಿಗಳಾಗಿದ್ದ ಅರಣ್ಯ ವೀಕ್ಷಕರನ್ನು ಆರ್‍ಎಫ್‍ಒ ಪುಟ್ಟರಾಜು ಕೆಲಸದಿಂದ ವಜಾಗೊಳಿಸಿದ್ದಾರೆ. ಕಳ್ಳತನದ ಆರೋಪ ಹೊರಿಸಿ 6 ಮಂದಿಯನ್ನು ವಜಾ ಮಾಡಿದ್ದು ಕಾಡು ಕಾಯುವವರಿಗೆ ಅಧಿಕಾರಿಗಳು ಬಲಿಪಶು ಮಾಡಿದ್ದಾರೆ ಎಂದು ಕಿಡಿಕಾರಿದರು.

ಆರ್‍ಎಫ್‍ಓ ಪುಟ್ಟರಾಜು ಮತ್ತು ನಮ್ಮನ್ನು ನಾರ್ಕೋ ಅನಾಲಿಸಿಸ್ ಪರೀಕ್ಷೆಗೆ ಒಳಪಡಿಸಿ ಸತ್ಯಾಂಶವನ್ನು ಸರ್ಕಾರ ಹೊರತೆಗೆಯಬೇಕು. ಹುಲಿ ಮತ್ತು ಚಿರತೆ ಶವಗಳನ್ನು ಅಕ್ರಮವಾಗಿ ವಿಲೇವಾರಿ ಮಾಡಿದ ಎಲ್ಲಾ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಬೇಕು. ಆರ್‍ಎಫ್‍ಒ ಅವರು ಹುಲಿ ಮತ್ತು ಚಿರತೆಯ ಶವವನ್ನು ರಹಸ್ಯವಾಗಿ ಹೂಳದಿರುವುದು ಸಾಬೀತಾದಾರೇ ನಾನು ಅವರ ಕಾಲಿಗೆ ಬಿದ್ದು ಕ್ಷಮೆಯಾಚಿಸುತ್ತೇನೆ ಎಂದು ಸವಾಲು ಎಸೆದಿದ್ದಾರೆ.

RELATED ARTICLES
- Advertisment -
Google search engine

Most Popular