ಹೊಸೂರು : ಪರಿಸರ ಸಂರಕ್ಷಣೆ ಕೇವಲ ಸರ್ಕಾರದ ಕರ್ತವ್ಯವಲ್ಲ.ಪ್ರತಿಯೊಬ್ಬ ಮಾನವನ ಕರ್ತವ್ಯ ಆಗಿದೆ, ಮುಂದಿನ ಪೀಳಿಗೆಗೆ ಸುಂದರ ಪರಿಸರ, ನೀರು, ಗಾಳಿ, ಬದುಕು ನೀಡುವ ಜವಾಬ್ದಾರಿ ನಮ್ಮದಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ ಪುರಸ್ಕೃತ ಸಾಹಿತಿಗಳಾದ ಡಾ. ಭೇರ್ಯ ರಾಮಕುಮಾರ್ ಹೇಳಿದರು.
ಸಾಲಿಗ್ರಾಮ ತಾಲ್ಲೂಕಿನ ಹರದನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಖಿಲ ಭಾರತೀಯ ಸಾಹಿತ್ಯ ಹಾಗೂ ಸಾಂಸ್ಕೃತಿಕ ಪರಿಷತ್ತು ಹಾಗೂ ಮಕ್ಕಳ ಸಾಹಿತ್ಯ ಪರಿಷತ್ತು ಸಂಯುಕ್ತವಾಗಿ ಹಮ್ಮಿಕೊಂಡಿದ್ದ ಪರಿಸರ ಸಂರಕ್ಷಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಪರಿಸರ ನಾಶದಿಂದಾಗಿ ಮಾನವ ಸಮಸ್ಯೆಗಳ ಸುಳಿಗೆ ಸಿಲುಕ್ಕಿದ್ದಾನೆ. ಹೃದಯಾಘಾತ, ಶ್ವಾಸಕೋಶ ದ ಕ್ಯಾನ್ಸರ್ ಮೊದಲಾದ ಕಾಯಿಲೆಗಳು ಹೆಚ್ಚುತ್ತಿವೆ. ಅತೀವೃಷ್ಟಿ, ಅನಾವೃಷ್ಟಿ ಉಂಟಾಗುತ್ತಿದೆ. ಕಾಡಿನ ನಾಶದಿಂದಾಗಿ ಆನೆಗಳು, ಚಿರತೆಗಳು ಗ್ರಾಮಗಳಿಗೆ ನುಗ್ಗುತ್ತಿವೆ. ಜನರು ಭಯದಿಂದ ಬಧುಕಬೇಕಾದ ಸ್ಥಿತಿ ಬಂದಿದೆ. ಇದ್ದಕ್ಕೆಲ್ಲ ಪರಿಸರ ವಿನಾಶವೇ ಕಾರಣ ಎಂದು ಆತಂಕ ವ್ಯಕ್ತ ಪಡಿಸಿದರು.
ಪರಿಸರ ಸಂರಕ್ಷಣೆ ಸರ್ಕಾರದ ಹೊಣೆ ಎಂದು ಜನರು ಕಣ್ಮುಚ್ಚಿ ಕೂರಬಾರದು. ಪ್ರತಿಯೊಬ್ಬರೂ ತಮ್ಮಗಳ ಹಾಗು ತಂದೆತಾಯಿಯ ಜನ್ಮದಿನದ, ಮತ್ತು ವಿವಾಹ ವಾರ್ಷಿಕೋತ್ಸವ ದಿನದಂದು, ತಮ್ಮ ಹಿರಿಯರ ಸವಿನೆನಪಿನಲ್ಲಿ ಪ್ರತಿ ವರ್ಷವೂ ಸಸಿಗಳನ್ನು ನೆಟ್ಟು ಬೆಳೆಸಬೇಕು. ಆ ಮೂಲಕ ಮುಂದಿನ ಪೀಳಿಗೆಗೆ ಸುಂದರ ಪರಿಸರ ನೀಡಬೇಕು ಎಂದು ಅವರು ನುಡಿದರು. ನಂತರ ಮಕ್ಕಳಿಂದ ಸಾಮೂಹಿಕ ಪರಿಸರ ಸಂರಕ್ಷಣೆಯ ಪ್ರತಿಜ್ಞೆ ಮಾಡಿಸಿದರು.
ನೇತ್ರ ತಜ್ಞರಾದ ಡಾ. ಸೌಮ್ಯ ಅವರು ಮಾತನಾಡಿ ಮಕ್ಕಳು ಮೊಬೈಲ್ ಬಳಸುವುದನ್ನು ಕಡಿಮೆ ಮಾಡಬೇಕು. ಮೊಬೈಲ್ ಗಳನ್ನು ಅತಿಯಾಗಿ ವೀಕ್ಷಿಸುವುದರಿಂದ ಮಕ್ಕಳಿಗೆ ಕಣ್ಣಿನ ಸಮಸ್ಯೆಗಳು ಉಂಟಾಗುತ್ತವೆ. ಈ ಬಗ್ಗೆ ಪೋಷಕರು ಗಮನ ಹರಿಸಬೇಕೆಂದು ತಿಳಿಸಿದರು.
ಮಕ್ಕಳ ಕನ್ನಡ ಸಾಹಿತ್ಯ ಪರಿಷತ್ತಿನ ಮೈಸೂರು ನರಸಿಂಹರಾಜ ಶಾಖೆ ಅಧ್ಯಕ್ಷರಾದ ಲವಕುಮಾರ್,
ನೇತ್ರ ತಜ್ಞ ಡಾ. ಪ್ರದೀಪ್, ಶಾಲಾ ಮುಖ್ಯ ಶಿಕ್ಷಕಿ ರೇಣುಕಾ ಶಿಕ್ಷಕರಾದ ಗಾಯತ್ರಿ, ವಾಸಂತಿ, ಸೌಮ್ಯ, ಬಸವರಾಜ್, ಸ್ವಾಮಿ ಉಪಸ್ಥಿತರಿದ್ದರು.